ಗದಗ, 04 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸರಳತೆಗೆ ಮಾದರಿಯಾದ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಈ ಬಾರಿ ದಸರಾ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಸಾಮಾನ್ಯವಾಗಿ ಆಡಳಿತದ ಮೇಲ್ದರ್ಜೆಯ ಅಧಿಕಾರಿಗಳ ಮನೆ, ಕಚೇರಿ, ಮಂಟಪಗಳಲ್ಲಿ ಭವ್ಯ ಸಮಾರಂಭಗಳು ನಡೆಯುವ ದಸರಾ ಹಬ್ಬವನ್ನು ಅವರು ಕಂದಾಯ ವಸತಿ ಆವರಣದಲ್ಲಿ ಪೌರ ಕಾರ್ಮಿಕರು ಹಾಗೂ ಸ್ವಚ್ಚತಾ ಸಿಬ್ಬಂದಿಯೊಂದಿಗೆ ಆಚರಿಸಿ ಹೊಸ ಸಂದೇಶ ನೀಡಿದ್ದಾರೆ.
ಕಂದಾಯ ವಸತಿ ಆವರಣದಲ್ಲಿ ನಡೆದ ವಿಜಯದಶಮಿ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ನೌಕರರು, ಸ್ವಚ್ಚತಾ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಹಬ್ಬದ ಸಂಭ್ರಮವನ್ನು ಎಲ್ಲರೊಡನೆ ಹಂಚಿಕೊಂಡ ಜಿಲ್ಲಾಧಿಕಾರಿ, ಹೂವು–ಹಣ್ಣಿನ ವಿನಿಮಯ ಮಾಡಿ ಪರಸ್ಪರ ದಸರಾ ಶುಭಾಶಯ ಕೋರಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಅವರು ತಮ್ಮ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಅಧಿಕಾರಿಗಳು, ಕಚೇರಿ ಸಿಬ್ಬಂದಿ ಹಾಗೂ ಕಾರ್ಮಿಕರು ಒಂದೇ ವೇದಿಕೆಯಲ್ಲಿ ಸೇರಿ ಆಚರಿಸಿದ ಈ ಸರಳ ದಸರಾ ಕಾರ್ಯಕ್ರಮದಲ್ಲಿ ಎಲ್ಲರೂ ಸಮಾನವಾಗಿ ಹಬ್ಬದ ಆನಂದವನ್ನು ಹಂಚಿಕೊಂಡರು.
ಜಿಲ್ಲಾಧಿಕಾರಿ ಶ್ರೀಧರರ ಈ ನಡೆ “ಅಧಿಕಾರಿ–ಸಿಬ್ಬಂದಿ–ಪೌರ ಕಾರ್ಮಿಕರ ನಡುವಣ ನಿಕಟತೆ ಹೆಚ್ಚಿಸುವ ಅರ್ಥಪೂರ್ಣ ಹಬ್ಬ” ಎಂದು ಜನರು ಶ್ಲಾಘಿಸಿದ್ದಾರೆ.
ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ಈ ಸರಳ ದಸರಾ, ಅಧಿಕಾರಿಗಳ ಸರಳ ಬದುಕು ಹಾಗೂ ಮಾನವೀಯತೆ ಎಷ್ಟು ಪ್ರೇರಣಾದಾಯಕವಾಗಬಹುದು ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಯಿತು.
ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರು ಕಂದಾಯ ನೌಕರರು, ಸ್ಚಚ್ಚತಾ ಕೆಲಸಗಾರರು, ಪೌರ ಕಾರ್ಮಿಕರೊಂದಿಗೆ ಉಪಹಾರ ಸವಿದು ಹಬ್ಬವನ್ನು ಸರಳ ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ನಗರ ಸಭೆ ಪೌರಾಯುಕ್ತ ರಾಜಾರಾಮ ಪವಾರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಆನಂದ ಬದಿ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP