ಬೆಂಗಳೂರು, 04 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಶ್ವದ ಅತಿದೊಡ್ಡ ದ್ವಿದಳ ಧಾನ್ಯಗಳ ಉತ್ಪಾದಕ ರಾಷ್ಟ್ರವಾಗಿದೆ ಭಾರತ. ಆದಾಗ್ಯೂ ದೇಶದಲ್ಲಿ ಉತ್ಪಾದನೆಗಿಂತ ಬೇಡಿಕೆಯೇ ಹೆಚ್ಚಿದ್ದು ಶೇ.20ರಷ್ಟು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಇದೀಗ ದ್ವಿದಳ ಧಾನ್ಯಗಳಲ್ಲೂ ಆತ್ಮನಿರ್ಭರತೆಗೆ ಒತ್ತು ನೀಡಿ 6 ವರ್ಷಗಳಲ್ಲಿ 350 ಲಕ್ಷ ಟನ್ ದ್ವಿದಳ ಧಾನ್ಯ ಉತ್ಪಾದನೆ ಗುರಿಯೊಂದಿಗೆ ಮಹತ್ತರ ಹೆಜ್ಜೆಯಿರಿಸಿದೆ.
ಭಾರತದಲ್ಲಿ ಜನರ ಆದಾಯ ಮತ್ತು ಜೀವನಮಟ್ಟ ಸುಧಾರಿಸುತ್ತಿರುವಂತೆ ದ್ವಿದಳ ಧಾನ್ಯಗಳ ಬಳಕೆಯೂ ಹೆಚ್ಚಾಗಿದೆ. ಸದ್ಯ ದೇಶೀಯ ಉತ್ಪಾದನೆ ಬೇಡಿಕೆಗೆ ತಕ್ಕಷ್ಟಿಲ್ಲವಾದ್ದರಿಂದ ಸರಿಸುಮಾರು ಶೇ.15–20ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದ ಬೆಳೆ ಮತ್ತು ಆಹಾರ ಪದ್ಧತಿಯಲ್ಲಿ ದ್ವಿದಳ ಧಾನ್ಯಗಳ ವಿಶೇಷ ಪ್ರಾಮುಖ್ಯತೆ ಮನಗಂಡು ಕೇಂದ್ರ ಸರ್ಕಾರ ಇದೀಗ ಈ ಬೆಳೆಯಲ್ಲೂ ಸ್ವಾವಲಂಬನೆ ಸಾಧಿಸಲು ಮುಂದಾಗಿದೆ.
2030-31ರ ವೇಳೆಗೆ ದ್ವಿದಳ ಧಾನ್ಯಗಳ ಕೃಷಿ ಪ್ರದೇಶವನ್ನು 310 ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸುವ ಹಾಗೂ ಉತ್ಪಾದನೆಯನ್ನು 350 ಲಕ್ಷ ಟನ್‌ಗಳಿಗೆ ಹೆಚ್ಚಿಸುವ ಮತ್ತು ಇಳುವರಿಯನ್ನು 1130 ಕೆಜಿ/ಹೆಕ್ಟೇರ್‌ಗೆ ಹೆಚ್ಚಿಸುವ ನಿರೀಕ್ಷೆಯಿದೆ. ಅಧಿಕ ಉತ್ಪಾದನೆ ಜತೆ ಜತೆಗೆ ಉದ್ಯೋಗಾವಕಾಶ ಸೃಷ್ಟಿಸಲೂ ಯೋಜನೆ ಹಾಗು ಯಶಸ್ವಿ ಅಭಿಯಾನ ಹಾಕಿಕೊಂಡಿದೆ ಕೇಂದ್ರ ಸರ್ಕಾರ.
*₹11,440 ಕೋಟಿ ವೆಚ್ಚದಲ್ಲಿ ʼಆತ್ಮನಿರ್ಭರತಾ ಮಿಷನ್:ʼ*
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ, ದ್ವಿದಳ ಧಾನ್ಯಗಳ ದೇಶೀಯ ಉತ್ಪಾದನೆ ಹೆಚ್ಚಳ ಮತ್ತು ಆತ್ಮನಿರ್ಭರತೆ ಸಾಧಿಸುವ ಗುರಿಯ ಹೆಗ್ಗುರುತಾಗಿ ʼದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತಾ ಮಿಷನ್ʼಗೆ ಅನುಮೋದನೆ ನೀಡಿದೆ. 2025-26ರಿಂದ 2030-31ರವರೆಗೆ ಆರು ವರ್ಷಗಳ ಅವಧಿಯಲ್ಲಿ ₹11,440 ಕೋಟಿ ಆರ್ಥಿಕ ಹೂಡಿಕೆಗೆ ಒತ್ತು ನೀಡಿ ಅನುಷ್ಠಾನಗೊಳಿಸಲು ಅಣಿಯಾಗಿದೆ.
ದ್ವಿದಳ ಧಾನ್ಯ ಆಮದು ಅವಲಂಬನೆಯಿಂದ ಹೊರ ಬರಲು, ಹೆಚ್ಚುತ್ತಿರುವ ಬೇಡಿಕೆ ಪೂರೈಸಲು, ಉತ್ಪಾದನೆ ಗರಿಷ್ಠಗೊಳಿಸಲು ಮತ್ತು ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ 2025-26ರ ಬಜೆಟ್‌ನಲ್ಲಿ ʼದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತಾ ಮಿಷನ್ʼ ಘೋಷಿಸಿದ್ದು, ಸಂಶೋಧನೆ, ಬೀಜ ವ್ಯವಸ್ಥೆ, ಪ್ರದೇಶ ವಿಸ್ತರಣೆ, ಸಂಗ್ರಹಣೆ ಮತ್ತು ಬೆಲೆ ಸ್ಥಿರತೆ ಒಳಗೊಂಡಂತೆ ಸಮಗ್ರ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ.
ಈ ಮಿಷನ್ ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತೆ (ಸ್ವಾವಲಂಬನೆ) ಗುರಿ ಸಾಧನೆ, ರೈತರ ಆದಾಯ ವೃದ್ಧಿ ಜತೆಗೆ ಅಮೂಲ್ಯವಾದ ವಿದೇಶಿ ವಿನಿಮಯವನ್ನೂ ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ಯೋಜಿಸಿದೆ. ಅಲ್ಲದೇ, ಹವಾಮಾನ ಸ್ಥಿತಿಸ್ಥಾಪಕತ್ವ, ಸುಧಾರಿತ ಮಣ್ಣಿನ ಆರೋಗ್ಯ ಮತ್ತು ಪಾಳು ಪ್ರದೇಶಗಳಲ್ಲಿ ಬೆಳೆ ಉತ್ಪಾದನೆಗೆ ಗಮನಾರ್ಹ ಕೊಡುಗೆ ನೀಡಲಿದೆ.
*1,000 ಸಂಸ್ಕರಣಾ ಘಟಕಗಳ ಸ್ಥಾಪನೆ:*
ದೇಶಾದ್ಯಂತ ಅತಿ ಹೆಚ್ಚು ದ್ವಿದಳ ಧಾನ್ಯ ಬೆಳೆಯುವ ಪ್ರದೇಶಗಳಲ್ಲಿ ಬೆಳೆ ಕೊಯ್ಲು ನಷ್ಟ ಕಡಿಮೆ ಮಾಡಲು, ಸ್ಥಳೀಯವಾಗಿ ಬೆಳೆ ಖರೀದಿ ಮತ್ತು ರೈತರಿಗೆ ಉತ್ತಮ ಬೆಲೆ ಲಭಿಸಲು 1,000 ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೀಜಗಳು, ಕೊಯ್ಲಿನ ನಂತರದ ಮೂಲಸೌಕರ್ಯ ಮತ್ತು ಸಂಗ್ರಹಣೆ ವ್ಯವಸ್ಥೆ ಸುಧಾರಣೆಗೆ ಈ ಮಿಷನ್ ಒತ್ತು ನೀಡುತ್ತದೆ.
*2 ಕೋಟಿ ರೈತರಿಗೆ ಪ್ರಯೋಜನ:*
ಈ ದ್ವಿದಳ ಧಾನ್ಯಗಳ ಆತ್ಮನಿರ್ಭರತಾ ಮಿಷನ್‌ನಿಂದ ದೇಶದಲ್ಲಿ ಸರಿಸುಮಾರು 2 ಕೋಟಿ ರೈತರಿಗೆ ಪ್ರಯೋಜನವಾಗುವ ನಿರೀಕ್ಷೆಯಿದೆ. ದ್ವಿದಳ ಧಾನ್ಯ ಬೆಳೆಗಾರರನ್ನು ಬಲಪಡಿಸುವ ಸಲುವಾಗಿ 88 ಲಕ್ಷ ಉಚಿತ ಬೀಜದ ಕಿಟ್‌ಗಳನ್ನು ನೀಡಲಾಗುತ್ತದೆ. ಇದಲ್ಲದೆ, ಮುಂಬರುವ 4 ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ನೂರಕ್ಕೆ ನೂರರಷ್ಟು ತೊಗರಿ, ಉದ್ದು ಮತ್ತು ಮಸೂರ್‌ನ ಖರೀದಿಗೆ ಯೋಜನೆ ಹಾಕಿಕೊಳ್ಳಲಾಗಿದೆ.
*126 ಲಕ್ಷ ಕ್ವಿಂಟಾಲ್ ಬೀಜ ವಿತರಣೆ:*
2030-31ರ ವೇಳೆಗೆ 370 ಲಕ್ಷ ಹೆಕ್ಟೇರ್‌ಗಳಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯುವ ರೈತರಿಗೆ ದ್ವಿದಳ ಧಾನ್ಯಗಳ ಸುಧಾರಿತ ತಳಿಗಳು ವ್ಯಾಪಕವಾಗಿ ದೊರಕುವಂತೆ ಅತ್ಯಧಿಕ 126 ಲಕ್ಷ ಕ್ವಿಂಟಾಲ್ ಪ್ರಮಾಣೀಕೃತ ಬೀಜಗಳ ವಿತರಣೆ ಗುರಿ ಹೊಂದಿದೆ. ಭತ್ತದ ಪಾಳು ಭೂಮಿ ಪ್ರದೇಶ ಮತ್ತು ಇತರೆ ಭೂಮಿಯಲ್ಲಿ ಅಂತರ ಬೆಳೆ ಹಾಗೂ ಬೆಳೆ ವೈವಿಧ್ಯೀಕರಣ ಉತ್ತೇಜಿಸುವ ಮೂಲಕ ಹೆಚ್ಚುವರಿಯಾಗಿ 35 ಲಕ್ಷ ಹೆಕ್ಟೇರ್ ವಿಸ್ತರಿಸಲು ಯೋಜಿಸಿದ್ದು, ಇದಕ್ಕಾಗಿ 88 ಲಕ್ಷ ಬೀಜ ಕಿಟ್‌ಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.
*ತಳಿ ಸಂವರ್ಧನೆ, ಪ್ರಾತ್ಯಕ್ಷಿಕೆಗೆ ಒತ್ತು:*
ಹೆಚ್ಚಿನ ಉತ್ಪಾದಕತೆ, ರೋಗ ನಿರೋಧಕ ಮತ್ತು ಹವಾಮಾನ ನಿರೋಧಕವಾಗಿರುವ ದ್ವಿದಳ ಧಾನ್ಯಗಳ ತಳಿ ಅಭಿವೃದ್ಧಿಗೆ ಈ ಮಿಷನ್ ಒತ್ತು ನೀಡಲಿದ್ದು, ದ್ವಿದಳ ಧಾನ್ಯ ಬೆಳೆಯುವ ರಾಜ್ಯಗಳಲ್ಲಿ ಸೂಕ್ತ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಪ್ರಯೋಗ ನಡೆಸಲಾಗುತ್ತದೆ. ಮಣ್ಣಿನ ಆರೋಗ್ಯ, ಕೃಷಿ ಯಾಂತ್ರೀಕರಣ, ಸಮತೋಲಿತ ರಸಗೊಬ್ಬರ ಬಳಕೆ, ಸಸ್ಯ ಸಂರಕ್ಷಣೆ ಉತ್ತೇಜಿಸಲು ಐಸಿಎಆರ್, ಕೆವಿಕೆಗಳು ಮತ್ತು ರಾಜ್ಯ ಇಲಾಖೆಗಳಿಂದ ವ್ಯಾಪಕ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತದೆ.
ರಾಜ್ಯಗಳು ಐದು ವರ್ಷಗಳ ರೋಲಿಂಗ್ ಬೀಜ ಉತ್ಪಾದನಾ ಯೋಜನೆಗಳನ್ನು ಸಿದ್ಧಪಡಿಸುತ್ತವೆ. ಉತ್ತಮ ತಳಿ ಬೀಜ ಉತ್ಪಾದನೆಯನ್ನು ಐಸಿಎಆರ್ ಮೇಲ್ವಿಚಾರಣೆ ಮಾಡುತ್ತದೆ. ರಾಜ್ಯ ಮತ್ತು ಕೇಂದ್ರ ಮಟ್ಟದ ಏಜೆನ್ಸಿಗಳು ಫೌಂಡೇಶನ್ ಮತ್ತು ಪ್ರಮಾಣೀಕೃತ ಬೀಜ ಉತ್ಪಾದನೆ ಮಾಡುತ್ತವೆ ಮತ್ತು ಬೀಜ ದೃಢೀಕರಣ, ಪತ್ತೆ ಹಚ್ಚುವಿಕೆ ಮತ್ತು ಸಮಗ್ರ ದಾಸ್ತಾನು (ಸಾಥಿ) ಪೋರ್ಟಲ್ ಮೂಲಕ ನಿಕಟವಾಗಿ ಟ್ರ್ಯಾಕ್ ಮಾಡುತ್ತವೆ.
*ಸಂಸ್ಕರಣಾ ಘಟಕಗಳಿಗೆ ₹25 ಲಕ್ಷ ಸಬ್ಸಿಡಿ ಸೌಲಭ್ಯ:*
ಸುಗ್ಗಿ ನಂತರ ಮೂಲಸೌಕರ್ಯ ಅಭಿವೃದ್ಧಿ, ಮೌಲ್ಯವರ್ಧನೆ, ರೈತರ ಆದಾಯ ವೃದ್ಧಿ, ಸಂಸ್ಕರಣೆ, ಪ್ಯಾಕೇಜಿಂಗ್ ಘಟಕಗಳ ಸ್ಥಾಪನೆಗೆ ಗರಿಷ್ಠ ₹25 ಲಕ್ಷ ಸಬ್ಸಿಡಿ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಕೆಲ ಸಂದರ್ಭಗಳಲ್ಲಿ ರೈತರಿಗಾಗುವ ಬೆಳೆನಷ್ಟ ನಿಯಂತ್ರಿಸಲಾಗುತ್ತದೆ. ಕ್ಲಸ್ಟರ್ ಆಧಾರಿತ ವಿಧಾನ ಅಳವಡಿಕೆ, ಸಂಪನ್ಮೂಲ ಹಂಚಿಕೆ, ಉತ್ಪಾದಕತೆ ವೃದ್ಧಿ, ದ್ವಿದಳ ಧಾನ್ಯಗಳ ಉತ್ಪಾದನೆ ಉತ್ತೇಜಿಸುವಲ್ಲಿ ಈ ಆತ್ಮನಿರ್ಭರ ಮಿಷನ್ ಅನುವು ಮಾಡಿಕೊಡಲಿದೆ.
PM-AASHA ಬೆಲೆ ಬೆಂಬಲ ಯೋಜನೆ (PSS) ಅಡಿಯಲ್ಲಿ ತೊಗರಿ, ಉದ್ದು ಮತ್ತು ಮಸೂರ್‌ನ ಗರಿಷ್ಠ ಸಂಗ್ರಹಣೆಗೆ ಆದ್ಯತೆ ನೀಡಲಾಗುತ್ತದೆ. NAFED ಮತ್ತು NCCF ಮುಂದಿನ ನಾಲ್ಕು ವರ್ಷಗಳಲ್ಲಿ ವಿವಿಧ ರಾಜ್ಯಗಳಲ್ಲಿ ರೈತರಿಂದ ಶೇ.100ರಷ್ಟು ದ್ವಿದಳ ಧಾನ್ಯ ಸಂಗ್ರಹಣೆ ಹಾಗೂ ರೈತರ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಜಾಗತಿಕ ಬೇಳೆ ಕಾಳುಗಳ ಬೆಲೆ ಮೇಲ್ವಿಚಾರಣೆಯ ಕಾರ್ಯವಿಧಾನ ಸ್ಥಾಪಿಸುತ್ತದೆ. ಒಟ್ಟಾರೆ ಪ್ರಧಾನಿ ನರೇಂದ್ರ ಅವರ ದೂರದೃಷ್ಟಿ ನಾಯಕತ್ವದಲ್ಲಿ ಭಾರತ ದ್ವಿದಳ ಧಾನ್ಯದಲ್ಲೂ ಆತ್ಮನಿರ್ಭರತೆ ಸಾಧಿಸುವ ದಿಟ್ಟ ಹೆಜ್ಜೆಯಿಸಿ ಜಾಗತಿಕ ಗಮನ ಸೆಳೆಯುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa