ರಾಯಚೂರು, 04 ಅಕ್ಟೋಬರ್ (ಹಿ.ಸ.):
ಆ್ಯಂಕರ್ : ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ಅ.3ರಂದು ಲಿಂಗಸುಗೂರ, ಮಸ್ಕಿ, ಸಿಂಧನೂರ, ಮಾನವಿ ತಾಲೂಕುಗಳಲ್ಲಿ ಸಂಚರಿಸಿ ಅತಿವೃಷ್ಟಿಯಿಂದಾದ ಬೆಳೆ ಹಾನಿ ಪರಿಶೀಲಿಸಿದರು.
ಪೂರ್ವನಿಗದಿಯಂತೆ ಬೆಳಗ್ಗೆ 9.30ರ ವೇಳೆಗೆ ಲಿಂಗಸುಗೂರ ತಾಲೂಕಿನ ಸರಹದ್ದು ಪ್ರವೇಶಿಸಿದ ಸಚಿವರು, ಗುರಗುಂಟಾ ಗ್ರಾಮದ ಮೂಲಕ ಬೆಳೆ ಹಾನಿಯ ಪರಿವೀಕ್ಷಣೆ ಆರಂಭಿಸಿದರು.
ಲಿಂಗಸುಗೂರ ಕ್ಷೇತ್ರದ ಶಾಸಕರಾದ ಮಾನಪ್ಪ ಡಿ ವಜ್ಜಲ್ ಮತ್ತು ವಿಧಾನ ಪರಿಷತ್ ಶಾಸಕರಾದ ಶರಣಗೌಡ ಪಾಟೀಲ ಬಯ್ಯಾಪುರ ಅವರೊಂದಿಗೆ ಯರಡೋಣದಲ್ಲಿ ತೊಗರಿ ಬೆಳೆಯ ವೀಕ್ಷಣೆ ಮಾಡಿದರು.
ಮಳೆಯಿಂದಾಗಿ ಲಿಂಗಸುಗೂರು ತಾಲೂಕಿನ ಬಹುತೇಕ ಕಡೆಗಳಲ್ಲಿನ ರಸ್ತೆಗಳು ಹಾಳಾಗಿದ್ದು, ಇದಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡಿ ರಸ್ತ ಸರಿಪಡಿಸಬೇಕು ಎಂದು ಇದೆ ವೇಳೆ ಶಾಸಕರಾದ ಮಾನಪ್ಪ ಡಿ ವಜ್ಜಲ್ ಅವರು ಸಚಿವರಿಗೆ ಮನವಿ ಸಲ್ಲಿಸಿದರು.
ಸಚಿವರು ಬಳಿಕ ಮಸ್ಕಿ ತಾಲೂಕು ಪ್ರವೇಶಿಸಿ, ಮಸ್ಕಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆರ್ ಬಸನಗೌಡ ತುರವಿಹಾಳ ಅವರೊಂದಿಗೆ ಕೋಠ ಗ್ರಾಮದ ಬಳಿಯಲ್ಲಿ ಹತ್ತಿ ಬೆಳೆ ಮತ್ತು ಸಂತೆಕೆಲ್ಲೂರ ಗ್ರಾಮದಲ್ಲಿ ಹಾಳಾದ ತೊಗರಿ ಬೆಳೆಯ ಮಾಹಿತಿ ಪಡೆದುಕೊಂಡರು.
ಬಳಿಕ ಸಿಂಧನೂರ ತಾಲೂಕು ಸರಹದ್ದಿನ ರಾಮತ್ನಾಳ ಗ್ರಾಮದಲ್ಲಿ ಸಿಂಧನೂರ ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಹಾಗೂ ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ ಅವರೊಂದಿಗೆ ಹತ್ತಿ ಬೆಳೆಯ ವೀಕ್ಷಣೆ ನಡೆಸಿದರು.
ಸಚಿವರು, ಮಧ್ಯಾಹ್ನ 1.30ರ ವೇಳೆಗೆ ಮಾನವಿ ತಾಲೂಕಿನ ಸರಹದ್ದು ಪ್ರವೇಶಿಸಿ ಹಿರೇಕೋಟ್ನೇಕಲ್ ಗ್ರಾಮದ ರೈತ ಮುದುಕಪ್ಪಗೌಡ ವಟಗಲ್ ಅವರ ಜಮೀನಲ್ಲಿನ ಹತ್ತಿ ಬೆಳೆಯನ್ನು ಮಾನವಿ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಹಾಗೂ ಮಸ್ಕಿ ಕ್ಷೇತ್ರದ ಶಾಸಕರಾದ ಆರ್ ಬಸನಗೌಡ ತುರ್ವಿಹಾಳ ಅವರೊಂದಿಗೆ ವೀಕ್ಷಣೆ ನಡೆಸಿ ಮಾಹಿತಿ ಪಡೆದುಕೊಂಡರು.
ನೀರಮಾನ್ವಿಯ ರೈತ ಮಹೇಶ ನಾಗಸಾಯಿ ಅವರ ಜಮೀನಿಗೆ ತೆರಳಿ ಹಾಳಾದ ಹತ್ತಿ ಬೆಳೆಯ ವೀಕ್ಷಣೆ ನಡೆಸಿದರು.
ಜಂಟಿ ಸಮೀಕ್ಷೆಗೆ ಸೂಚನೆ : ರಾಯಚೂರು ಜಿಲ್ಲಾದ್ಯಂತ ಈಗಾಗಲೇ ಬೆಳೆ ಹಾನಿ ಕುರಿತ ಸಮೀಕ್ಷೆ ಆರಂಭವಾಗಿದೆ. ಅಧಿಕಾರಿಗಳಿಗೆ ಅಚ್ಚುಕಟ್ಟಾಗಿ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಎ ವಸಂತಕುಮಾರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ., ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಅಧಿಕಾರೇತರ ಸದಸ್ಯರಾದ ಮತ್ತು ಪ್ರಾದೇಶಿಕ ಅಸಮತೋಲನ ತಜ್ಞರಾದ ಡಾ. ರಝಾಕ್ ಉಸ್ತಾದ್ ಹೆಚ್, ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶೆಟ್ಟಿ, ಕೃಷಿ, ತೋಟಗಾರಿಕೆ ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್