ವಿಜಯಪುರ, 4 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಧಾರಾಕಾರ ಮಳೆ, ಭೀಮೆ ಹಾಗೂ ಡೋಣಿ ನದಿ ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಹಾಗೂ ಜಮೀನುಗಳಿಗೆ ಪ್ರತಿಪಕ್ಷ ನಾಯಕ ಆರ್. ಅಶೋಕ, ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯಸಚೇತಕ ಎನ್. ರವಿಕುಮಾರ್, ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಅನೇಕ ಹಿರಿಯ ನಾಯಕರ ತಂಡ ಭೇಟಿ ನೀಡಿ ರೈತರ ಅಹವಾಲು ಆಲಿಸಿತು.
ಅಂಜುಟಗಿ, ಅಗರಖೇಡ, ಮಿರಗಿ, ದೇವಣಗಾಂವ ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.
ಅಕಾಲಿಕ ಮಳೆ ಹಾಗೂ ನದಿ ಪ್ರವಾಹದಿಂದ ದೊಡ್ಡ ಮಟ್ಟದ ನೀರು ಹೊಲಗಳಿಗೆ ನುಗ್ಗಿದ ಪರಿಣಾಮ ಬೆಳೆಗಳಿಗೆ ಆಗಿರುವ ಹಾನಿ ಕಂಡು ಅಶೋಕ್ ಒಂದು ಕ್ಷಣ ಅಘಾತಗೊಂಡರು.
ಅಪಾರ ಪ್ರಮಾಣದ ತೊಗರಿ, ಸೂರ್ಯಪಾನ, ಕಬ್ಬು ನೀರಿನ ಪ್ರವಾಹಕ್ಕೆ ಸಿಲುಕಿದ್ದನ್ನು ಕಂಡು ಆತಂಕ ವ್ಯಕ್ತಪಡಿಸಿದರು. ಜೊತೆಗೆ ಮಳೆಯಿಂದ ಹಾನಿಗೀಡಾಗಿರುವ ಮನೆಗಳನ್ನು ವೀಕ್ಷಿಸಿ ಜಲಾವೃತವಾಗಿರುವ ಮನೆಗಳಿಗೂ ಭೇಟಿ ನೀಡಿ ಅಹವಾಲು ಆಲಿಸುವ ಕೆಲಸ ಮಾಡಿದರು.
ಬಂಗಾರ ವರ್ಣದಿಂದ ಕಂಗೊಳಿಸುವ ಸೂರ್ಯಪಾನ ಹೊಲ ನೋಡುವುದೇ ಒಂದು ಹಬ್ಬ, ಆದರೆ ಧಾರಾಕಾರ ಮಳೆ ಹಾಗೂ ನದಿ ಪ್ರವಾಹದಿಂದಾಗಿ ದೊಡ್ಡ ಮಟ್ಟದಲ್ಲಿ ನೀರಿನ ಹರಿವಿನಿಂದಾಗಿ ಸೂರ್ಯಪಾನ ಬಾಡಿ ಕಪ್ಪು ಬಣ್ಣಕ್ಕೆ ತಿರುಗಿದ್ದನ್ನು ಕಂಡು ಪ್ರತಿಪಕ್ಷ ನಾಯಕ ಆರ್. ಅಶೋಕ ಸೇರಿದಂತೆ ಅನೇಕ ಮುಖಂಡರು ದಂಗಾದರು.
ಮಿರಗಿಯಲ್ಲಿ ರೈತರು ಬೆಳೆದ ಸೂರ್ಯಪಾನ ಸಂಪೂರ್ಣ ಹಾನಿಗೀಡಾಗಿರುವುದನ್ನು ವೀಕ್ಷಿಸಿದರು.
ಈ ವೇಳೆ ರೈತರೆಲ್ಲರೂ ತಮ್ಮ ನೋವು ವ್ಯಕ್ತಪಡಿಸಿ `ಮಳೆ ಉತ್ತಮವಾಗಿ ಬಂದಿತ್ತು, ಹೀಗಾಗಿ ಈ ಬಾರಿ ಬೆಳೆ ಬರುವ ಸಾಧ್ಯತೆ ಇತ್ತು, ನಮ್ಮ ಕಷ್ಟ ನೀಗುವ ನಿರೀಕ್ಷೆ ಇತ್ತು, ಆದರೆ ಭಾರೀ ಮಳೆ ಹಾಗೂ ಪ್ರವಾಹ ನಮ್ಮನ್ನು ಮತ್ತೆ ತೊಂದರೆಗೆ ನೂಕಿದೆ, ಯಾರೂ ನಮ್ಮ ಅಹವಾಲು ಆಲಿಸಿಲ್ಲ, ನೀವು ಕೂಡಾ ಬರೀ ಬಂದು ಹೋಗಬೇಡಿ, ನಮಗೆ ನೆರವಾಗಿ, ಸರ್ಕಾರಕ್ಕೆ ನಮ್ಮ ಸಮಸ್ಯೆಯನ್ನು ವಿವರಿಸಿ ಎಂದು ಅನೇಕ ರೈತರು ಹೇಳಿದರು.
ಆಗ ಭರವಸೆ ತುಂಬಿದ ಪ್ರತಿಪಕ್ಷ ನಾಯಕ ಆರ್. ಅಶೋಕ, ಸಿ.ಟಿ. ರವಿ ಮೊದಲಾದವರು, `ಈ ಸರ್ಕಾರಕ್ಕೆ ಜವಾಬ್ದಾರಿಯೇ ಇಲ್ಲದಂತಾಗಿದೆ, ಇಷ್ಟೊಂದು ತೊಂದರೆ ಎದುರಿಸುತ್ತಿದ್ದರೂ ಸ್ಥಳಕ್ಕೆ ಭೇಟಿ ನೀಡುವ ಸೌಜನ್ಯವೂ ಅವರಿಗೆ ಇಲ್ಲ ಎಂಬುದು ಬೇಜವಾಬ್ದಾರಿ ಸಂಗತಿ, ಆದರೆ ಪ್ರತಿಪಕ್ಷವಾಗಿರುವ ನಾವು ನಿಮ್ಮ ಧ್ವನಿಯಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ, ನಿಮ್ಮ ಜೊತೆ ನಾವಿದ್ದೇವೆ ಭಯಬೇಡ ಎಂದು ಅಭಯ ತುಂಬಿದರು.
ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಅನೇಕ ರೈತರು ತಮ್ಮ ನೋವು ಹಾಗೂ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಪ್ರತಿಪಕ್ಷ ನಾಯಕರಿಗೆ ನೀಡಿದರು.
ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಉಮೇಶ ಕಾರಜೋಳ, ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಚಂದ್ರಶೇಖರ ಕವಟಗಿ, ಸಂಜೀವ ಐಹೊಳಿ, ಡಾ.ಸುರೇಶ ಬಿರಾದಾರ, ಈರಣ್ಣ ರಾವೂರ, ಮಳುಗೌಡ ಪಾಟೀಲ, ಮಲ್ಲಿಕಾರ್ಜುನ ಜೋಗೂರ, ಸಾಬು ಮಾಶ್ಯಾಳ, ಹಣಮಂತರಾಯ ಬಿರಾದಾರ, ಅನೀಲ ಜಮಾದಾರ, ಸ್ವಪ್ನಾ ಕಣಮುಚನಾಳ, ವಿವೇಕಾನಂದ ಡಬ್ಬಿ, ವಿಕಾಸ ಪದಕಿ, ಕೃಷ್ಣಾ ಗುನ್ನಾಳಕರ, ಭೀಮಾಶಂಕರ ಹದನೂರ, ಭೀಮನಗೌಡ ಬಿರಾದಾರ, ರಾಜಕುಮಾರ ಸಗಾಯಿ, ಬಸವರಾಜ ಬೈಚಬಾಳ, ವಿಜಯ ಜೋಶಿ ವರಿಸ್ ಕುಲಕರ್ಣಿ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande