

ರಾಯಚೂರು, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತದ ಉಪ ಪ್ರಧಾನಿ ಮತ್ತು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲರು ರಾಷ್ಟ್ರವನ್ನು ಒಟ್ಟುಗೂಡಿಸಿ ಒಂದೇ ಒಕ್ಕೂಟ ವ್ಯವಸ್ಥೆಯ ಆಡಳಿತವನ್ನು ದೇಶಕ್ಕೆ ನೀಡಿದ್ದಾರೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ತಿಳಿಸಿದ್ದಾರೆ.
ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಲ್‍ನಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಏಕತಾ ದಿವಸ ಆಚರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ 150 ನೇ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಭಾರತದಲ್ಲಿ 560ಕ್ಕೂ ಹೆಚ್ಚು ಸಂಸ್ಥಾನಗಳು, ಸಂಸ್ಕೃತಿ, ಸಂಪ್ರದಾಯಗಳಿದ್ದವು. ಸರ್ದಾರ್ ಪಟೇಲರು ಈ ಸವಾಲನ್ನು ವೈಯಕ್ತಿಕ ಧ್ಯೇಯವಾಗಿ ಸ್ವೀಕರಿಸಿ ಎಲ್ಲವನ್ನೂ ಒಗ್ಗೂಡಿಸಿ ಅಖಂಡ ಭಾರವನ್ನು ನಿರ್ಮಾಣ ಮಾಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಂದಾಗಿಯೇ ಭಾರತ ಇಂದು ಅಭಿವೃದ್ಧಿ ಮತ್ತು ಪ್ರಗತಿಯೊಂದಿಗೆ ಸಾಗುತ್ತಿದೆ ಎಂದರು.
ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ಕುಲಸಚಿವರಾದ ಡಾ. ಚನ್ನಪ್ಪ. ಎ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ. ಸುಯಮೀಂದ್ರ ಕುಲಕರ್ಣಿ, ಡೀನ್‍ಗಳಾದ ಪ್ರೊ. ಪಾರ್ವತಿ ಸಿ.ಎಸ್., ಪ್ರೊ. ಪಿ. ಭಾಸ್ಕರ್, ಡಾ. ಲತಾ ಎಂ.ಎಸ್. ಉಪಸ್ಥಿತರಿದ್ದರು.
ಉಪ ಕುಲಸಚಿವರಾದ ಡಾ. ಕೆ. ವೆಂಕಟೇಶ್ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಜಿ.ಎಸ್. ಬಿರಾದಾರ ಅವರು ರಾಷ್ಟ್ರೀಯ ಏಕತಾ ದಿವಸ ಪ್ರತಿಜ್ಞಾ ವಿಧಿ ಬೋಧಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್