ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಜಿಗಜಿಣಗಿ ಕಿಡಿ
ವಿಜಯಪುರ, 31 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಅಜ್ಜಿಗೆ ಅರಿವೇಯ ಚಿಂತೆ, ಮೊಮ್ಮಗಳಗೆ ಮದುವೆಯ ಚಿಂತೆ ಎಂಬಂತೆ ರಾಜ್ಯದ ಜನತೆಗೆ ಪ್ರವಾಹ ಮತ್ತು ಅತಿವೃಷ್ಠಿಯಿಂದಾದ ಹಾನಿಗೆ ಪರಿಹಾರದ ಚಿಂತೆಯಾದರೆ ಕಾಂಗ್ರೆಸ್ಸಿಗರಿಗೆ ಸಿಎಂ ಸ್ಥಾನ, ಮಂತ್ರಿ ಪದವಿಯ ಚಿಂತೆಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿ
ಎಂಪಿ


ವಿಜಯಪುರ, 31 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಅಜ್ಜಿಗೆ ಅರಿವೇಯ ಚಿಂತೆ, ಮೊಮ್ಮಗಳಗೆ ಮದುವೆಯ ಚಿಂತೆ ಎಂಬಂತೆ ರಾಜ್ಯದ ಜನತೆಗೆ ಪ್ರವಾಹ ಮತ್ತು ಅತಿವೃಷ್ಠಿಯಿಂದಾದ ಹಾನಿಗೆ ಪರಿಹಾರದ ಚಿಂತೆಯಾದರೆ ಕಾಂಗ್ರೆಸ್ಸಿಗರಿಗೆ ಸಿಎಂ ಸ್ಥಾನ, ಮಂತ್ರಿ ಪದವಿಯ ಚಿಂತೆಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಗತಿಸಿದರೂ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ‌‌. ಒಂದೇ ಒಂದು ಮಹತ್ತರ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗದೆ ಈ ಹಿಂದಿನ ಸರ್ಕಾರದ ಯೋಜನೆಗಳನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಜನ ಸಂಕಷ್ಟದಲ್ಲಿದ್ದು ಪರಿಹಾರಕ್ಕೆ ಅಂಗಲಾಚುತ್ತಿದ್ದರೆ ಶಾಸಕರು, ಸಚಿವರು, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಆದಿಯಾಗಿ ಎಲ್ಲರೂ ಅಧಿಕಾರದ ಹಪಾಹಪಿಗಿಳಿದಿದ್ದಾರೆ ಎಂದರು.

ಇವರ ಪರಸ್ಪರ ಕಚ್ಚಾಟ, ಪೈಪೋಟಿಯಿಂದಾಗಿ ಅಭಿವೃದ್ಧಿ ಪರ ಚರ್ಚೆ, ಜನಪರ‌ ಕಾಳಜಿ, ನೆರವಿನ ನಿರೀಕ್ಷೆಗಳೆಲ್ಲವೂ ಮಣ್ಣು ಪಾಲಾಗುತ್ತಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ದಿನೇ ದಿನೇ ಜೋರಾಗಿದ್ದರೆ ಜಿಲ್ಲೆಗಳಲ್ಲಿ ಸಚಿವ ಸ್ಥಾನಕ್ಕಾಗಿ ಶಾಸಕರೆಲ್ಲ ಎದ್ದು ಕುಳಿತಿದ್ದಾರೆ. ಇವರ ಈ ಕಚ್ಚಾಟ ಕಂಡು ಜನ ರೋಸಿ ಹೋಗಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಮಾತನಾಡದ ಶಾಸಕರುಗಳು ಮಂತ್ರಿ ಪದವಿಗಾಗಿ ದಿನಕ್ಕೊಂದು ಸರ್ಕಸ್ ನಡೆಸಿದ್ದಾರೆ‌. ಕ್ಷಣಕ್ಕೊಂದು ನಾಟಕ ಮಾಡುತ್ತಿದ್ದಾರೆ ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗುಂಡಿಗಳು ರಾರಾಜಿಸುತ್ತಿವೆ. ಅತಿವೃಷ್ಠಿ ಹಾಗೂ ಪ್ರವಾಹದಿಂದಾಗಿ ತೊಗರಿ, ಹತ್ತಿ, ಮಕ್ಕೆಜೋಳ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ಹಾಳಾಗಿದ್ದು ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ‌. ಹಿಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದು ಸಕಾಲಕ್ಕೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಿಗುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಅಳಿದುಳಿದ ಕಬ್ಬು ಕಾರ್ಖಾನೆಗಳು ಕಳುಹಿಸಲು ಸನ್ನದ್ದರಾಗಿದ್ದರೂ ಕಬ್ಬಿನ ದರ ನಿಗದಿ ಮಾಡಿಲ್ಲ. ಹೀಗಾಗಿ ಕಬ್ಬು ನೆರೆಯ ಮಹಾರಾಷ್ಟ್ರ ದ ಪಾಲಾಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಮತ್ತು ಸಂಕಷ್ಟಗಳ ಕಡೆ ಗಮನ ಕೊಡದೇ ಅಧಿಕಾರಕ್ಕಾಗಿ ಕಿತ್ತಾಟ ನಡೆಸಿರುವುದು ನಾಚಿಕೆಗೇಡಿನ ಸಂಗತಿ ಆಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ದಿನಕ್ಕೊಂದು ವಿವಾದ, ಚರ್ಚೆ ಹುಟ್ಟು ಹಾಕುತ್ತಿದೆ. ಆ ಮೂಲಕ ಜನರ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನ ನಡೆಸಿದೆ. ಆರ್ ಎಸ್ ಎಸ್ ವಿರುದ್ಧ ಮಾತನಾಡುವುದು, ಹಿಂದು ಧರ್ಮದ ಸನ್ಯಾಸಿಗಳನ್ನು ಅವಮಾನಿಸುವುದು, ಜಾತಿ ಸಮೀಕ್ಷೆ ಹೆಸರಲ್ಲಿ ಧರ್ಮ ವಿಭಜಿಸುವುದು. ಹೀಗೆ ಅನೇಕ ಕುಕೃತ್ಯಗಳಿಂದ ಜನರ ಸಮಸ್ಯೆ ಮತ್ತು ಸಂಕಷ್ಟಗಳನ್ನು ಮರೆಮಾಚಲು ಹೊರಟಿರುವುದುರು ರಾಜ್ಯದ ಜನತೆಗೆ ಮಾಡುತ್ತಿರುವ ಮಹಾ ಮೋಸ ಮತ್ತು ಅನ್ಯಾಯ. ಅಭಿವೃದ್ಧಿ ಮಾಡಲಾಗದಿದ್ದರೆ, ಜನರ ಸಮಸ್ಯೆ ಆಲಿಸಲಾಗದಿದ್ದರೆ, ಅನುದಾನವೇ ಇಲ್ಲದಿದ್ದರೆ ಸರ್ಕಾರ ವಿಸರ್ಜನೆಗೊಳಿಸಿ ಮತ್ತೆ ಜನರ ಮುಂದೆ ಹೋಗಿ. ಆದರೆ, ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ,‌ಜನರ ದಿಕ್ಕು ತಪ್ಪಿಸುವ ಕೃತ್ಯವನ್ನೆಂದೂ ಮಾಡಬೇಡಿ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande