
ವಿಜಯಪುರ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮುಂದಿನ ಪೀಳಿಗೆಗೆ ಶುದ್ದ ಗಾಳಿ, ನೀರು ಲಭ್ಯತೆ ಹಾಗೂ ಪರಿಸರ ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದ್ದು, ಮಾಲಿನ್ಯ ಮುಕ್ತ ಸಮಾನ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಬಾಗಲಕೋಟೆಯ ನವನಗರ-ಹುಬ್ಬಳ್ಳಿ ಬೈಪಾಸ್ ರಸ್ತೆಯ, ತೋವಿವಿಯ ಪಕ್ಕದ ಆವರಣದಲ್ಲಿ ಶುಕ್ರವಾರ ಬಾಗಲಕೋಟೆ, ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗೊಂಡು ೫೦ ವರ್ಷಗಳ ಪೂರೈಸಿದ ಹಿನ್ನಲೆಯಲ್ಲಿ ಹಮ್ಮಿಕೊಂಡ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭವಿಷ್ಯ ಕಾಲ ಉತ್ತಮವಾಗಿರಬೇಕಾದರೆ ಪರಿಸರ ಸಹ ಉಳಿಯಬೇಕು. ಎಲ್ಲರಿಗೂ ಪರಿಶುದ್ದವಾದ ಗಾಳಿ ಮತ್ತು ನೀರು ಸಿಗುವಂತಾಗಬೇಕು ಎಂದರು.
ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಎಲ್ಲರಿಗೂ ಅರಿವಾಗಿದೆ. ಇದರಿಂದ ಪಾಠ ನಾವು ಪಾಠ ಕಲಿಯಬೇಕಿದೆ. ಭೂಮಿ ಮತ್ತು ಅಂತರ್ಜಲಕ್ಕೆ ಮಾರಕವಾಗುತ್ತಿರುವ ರಾಸಾಯನಿಕ ವಸ್ತುಗಳ ಬಗ್ಗೆಯೂ ಅರಿವು ಉಂಟಾಗಬೇಕಿದೆ. ಈ ಭಾಗದಲ್ಲಿ ಕಬ್ಬು ಹೆಚ್ಚಾಗಿ ಬೆಳೆಯುತ್ತಿದ್ದು, ಸಕ್ಕರೆ ಕಾರ್ಖಾನೆಯಿಂದ ಹೊರಬಂದ ತ್ಯಾಜ್ಯ ಹಾಗೂ ಮಾಲಿನ್ಯದ ಬಗ್ಗೆಯೂ ಅರಿವು ಉಂಟಾಗಬೇಕು. ಅಲ್ಲದೇ ತ್ಯಾಜ್ಯ ಹಾಗೂ ಮಲೀನಕಾರಕ ಸೇರ್ಪಡೆಗೊಂಡ ಕಲುಷಿತ ನೀರು ನದಿಗೆ ಬಿಡಲಾಗುತ್ತಿದೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಗಮನ ಹರಿಸಬೇಕಿದೆ ಎಂದರು.
ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಮಾತನಾಡಿ ಪರಿಸರ, ಜಲಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಈ ಬಗ್ಗೆ ಮುಂದಿನ ಪೀಳಿಗೆ ಅಂದತೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿವು ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಬೇಕು. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಸಹಕಾರ ಕೂಡಾ ಅಗತ್ಯವಾಗಿದೆ. ಪರಿಸರ ಉಳುವಿಗಾಗಿ ಹಾಗೂ ಮಾಲಿನ್ಯ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಮತ್ತು ಸಂಘ ಸಂಸ್ಥೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮತನಾಡಿ ಪರಿಸರ ರಕ್ಷಣೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಪರಿಸರ ಪ್ರೇಮಿ ದೇಸಾಯಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪರಿಸರ ರಕ್ಷಣೆಗೆ ಮುಂದಾಗಿರುವ ಎರಡು ಜಿಲ್ಲೆಯ ಪೌರಕಾರ್ಮಿಕರನ್ನು ಸಹ ಸನ್ಮಾನಿಸಲಾಯಿತು. ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಲಿಂಗರಾಜು, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಅನುಕುಮಾರ ಚಳಗೇರಿ, ವಿಜಯಪುರ ಪರಿಸರ ಅಧಿಕಾರಿ ವಿವೇಕ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ವೇಳೆ ಇಂದಿರಾ ಪ್ರೀಯದರ್ಶಿನಿ ಪ್ರಶಸ್ತಿ ಪ್ರಧಾನ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಗೆ ಅಮೂಲ್ಯವದ ಕೊಡುಗೆ ನೀಡಿರುವ ಬಾಗಲಕೋಟೆ ಜಿಲ್ಲೆಯ ಶಿಕ್ಷಕ ಪಿ.ಡಿ.ವಾಲಿಕಾರ, ನಾಗರಳಾ ಎಸ್.ಸಿ. ಗೌರಿ ಶಂಕರ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣಾಭಿವೃದ್ದಿ ಸಂಘದ ಅಧ್ಯಕ್ಷ ಪವಿತ್ರಾ ದ್ಯಾವಪ್ಪ ಜಕ್ಕನ್ನವರ, ಶಿವರಡ್ಡಿ ಹನಮರಡ್ಡಿ ವಾಸನ, ವಿಜಯಪುರ ಜಿಲ್ಲೆಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಸಿದ್ದೇಶ್ವರ ದೇವಸ್ಥಾನ ಕಮಿಟಿ, ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಶಿವಾನಂದ ಕಟ್ಟಿಮನಿ, ನಾನಾ ಸಾಹೇಬ ದ್ಯಾಮನಗೌಡ ಪಾಟೀಲ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande