








ಬಳ್ಳಾರಿ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತವು ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದ ದೇಶವಾಗಿದ್ದು ಪ್ರಪಂಚದಾದ್ಯಂತ ರಾಷ್ಟ್ರೀಯ ಐಕ್ಯತೆ ಸಾರಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಐಕ್ಯತಾ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ, ಏಕೀಕರಣದ ಶಿಲ್ಪಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮದಿನದ ವಾರ್ಷಿಕೋತ್ಸವದ ನಿಮಿತ್ತ ಸಾರ್ವಜನಿಕರಲ್ಲಿ ನಾಗರಿಕರ ಸುರಕ್ಷತೆ ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ರನ್-ಫಾರ್-ಯುನಿಟಿ (ಏಕತೆಗಾಗಿ ಓಟ) ಮ್ಯಾರಥಾನ್ ಓಟಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಖಂಡ ಭಾರತ ಒಗ್ಗೂಡುವಿಕೆಗೆ ಕಾರಣೀಭೂತರಾದ `ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸೇವೆ ಸದಾ ಸ್ಮರಣೀಯ. ಭಾರತದ ಸ್ವಾತಂತ್ರ್ಯದ ನಂತರ ಎಲ್ಲಾ ರಾಜ್ಯಗಳನ್ನು ವಿಲೀನಗೊಳಿಸಲು ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಒಟ್ಟುಗೂಡಿಸಲು ಸಾಕಷ್ಟು ಶ್ರಮಿಸಿದ್ದರು ಎಂದರು.
ಭಾರತದಲ್ಲಿ 565 ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು ಒಟ್ಟುಗೂಡಿಸಿ ಒಂದೇ ಒಕ್ಕೂಟ ವ್ಯವಸ್ಥೆಯನ್ನು ರಚಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಉಕ್ಕಿನಂತಹ ದೃಢತೆಯೇ ದೇಶದ ಏಕತೆಗೆ ಕಾರಣವಾಗಿದೆ. ರಾಜಿ ಸಂಧಾನ ಮತ್ತು ಮಿಲಿಟರಿ ಪೋರ್ಸ್‍ಗಳ ಮೂಲಕ ಏಕತೆಯನ್ನು ಮೂಡಿಸಿದರು. ಹಾಗಾಗಿ ಸ್ವತಂತ್ರ ಭಾರತದ ಮೊದಲ ಉಪಪ್ರಧಾನಿ ಮತ್ತು ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಗೌರವಾರ್ಥವಾಗಿ ಅಕ್ಟೋಬರ್ 31 ರಂದು ‘ರಾಷ್ಟ್ರೀಯ ಏಕತಾ ದಿವಸ’ ವನ್ನಾಗಿ ಆಚರಿಸಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು, ಯುವ ಸಮುದಾಯ ಆನ್‍ಲೈನ್ ಗೇಮ್, ಆನ್ ಲೈನ್ ವಂಚನೆಗಳಿಂದ ದೂರವಿರಬೇಕು. ಮೊಬೈಲ್ ನಲ್ಲಿ ಬರುವ ಯಾವುದೇ ರೀತಿಯ ಗೊತ್ತಿರದ ಫೈಲ್‍ಗಳ ಮೇಲೆ ಕ್ಲಿಕ್ ಮಾಡಬಾರದು. ಇದರಿಂದ ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳಿಂದ ದೂರ ಉಳಿಯುತ್ತೇನೆ. ಸಂಚಾರಿ ನಿಯಮಗಳನ್ನು ಪಾಲಿಸುತ್ತೇನೆ. ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ರಕ್ಷಿಸುತ್ತೇನೆ ಹಾಗೂ ಪಾಲನೆಗಳನ್ನೊಳಗೊಂಡ ಪ್ರತಿಜ್ಞಾ ವಿಧಿ ಕೈಗೊಳ್ಳಲಾಯಿತು ಮತ್ತು ಸಹಿ ಸಂಗ್ರಹ ಅಭಿಯಾನ ಮೂಲಕ ಗಣ್ಯರು ಸಹಿ ಹಾಕಿದರು.
ಮ್ಯಾರಥಾನ್ ಓಟವು ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ ಆರಂಭಗೊಂಡು ಇಂದಿರಾ ವೃತ್ತ- ನೂತನ ಜಿಲ್ಲಾಡಳಿತ ಭವನ- ಎಂ.ಜಿ ರಸ್ತೆ- ಅನಂತಪುರ ಬೈಪಾಸ್ ಕ್ರಾಸ್ ನಿಂದ ಮರಳಿ ಎಂ.ಜಿ ವೃತ್ತ- ಇಂದಿರಾ ವೃತ್ತ- ಎಸ್. ಎನ್.ಪೇಟೆ ಕ್ರಾಸ್(ಕೂಲ್ ಕಾರ್ನರ್)- ಡಿಎಆರ್ ಪೊಲೀಸ್ ಕವಾಯತು ಮೈದಾನಕ್ಕೆ ತಲುಪಿ ಮುಕ್ತಾಯಗೊಂಡಿತು.
ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾಳುಗಳಿಗೆ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.
*ವಿಜೇತರು:*
*ಪುರುಷ ವಿಭಾಗ:*
ಪ್ರಥಮ ಬಹುಮಾನ(10 ಸಾವಿರ ನಗದು): ಪುರುಷೋತ್ತಮ ಬಳ್ಳಾರಿ.
ದ್ವಿತೀಯ ಬಹುಮಾನ(5 ಸಾವಿರ ನಗದು): ಶಿವಾನಂದ ಬೆಳಗಾವಿ.
ತೃತೀಯ ಬಹುಮಾನ(3 ಸಾವಿರ ನಗದು): ಸುನೀಲ್ ಬೆಳಗಾವಿ.
*ಮಹಿಳಾ ವಿಭಾಗ:*
ಪ್ರಥಮ ಬಹುಮಾನ(10 ಸಾವಿರ ನಗದು): ಶಾಹೀನ್ ಎಸ್.ಡಿ ಹುಬ್ಬಳ್ಳಿ.
ದ್ವಿತೀಯ ಬಹುಮಾನ(5 ಸಾವಿರ ನಗದು): ಯು.ಶಿರೀಷ ಬಳ್ಳಾರಿ.
ತೃತೀಯ ಬಹುಮಾನ(3 ಸಾವಿರ ನಗದು): ವಿಜಯಲಕ್ಷ್ಮಿ ಧಾರವಾಡ.
ಈ ಸಂದರ್ಭದಲ್ಲಿ ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾ ಬಸವರಾಜ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ನವೀನ್ ಕುಮಾರ್, ಡಿಎಸ್‍ಪಿ ಗಳಾದ ನಂದಾರೆಡ್ಡಿ, ಪ್ರಸಾದ್ ಗೋಖಲೆ, ಮಾಲತೇಷ ಕೋನಬೇವು, ತಿಪ್ಪೇಸ್ವಾಮಿ, ಸಂತೋಷ್ ಚವ್ಹಾಣ್, ಸಿಪಿಐ ಗಳಾದ ಅಯ್ಯನಗೌಡ ಪಾಟೀಲ್, ಮಹಾಂತೇಶ್, ರವಿಚಂದ್ರ, ಹನುಮಂತಪ್ಪ, ಚಂದನಗೋಪಾಲ್, ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಶೇಖಸಾಬ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ನಿವೃತ್ತ ಯೋಧರು, ಐಎಂಎ ಸದಸ್ಯರು, ಬಳ್ಳಾರಿ ರನ್ನರ್ಸ್ ಅಸೋಷಿಯೇಷನ್ ಹಾಗೂ ರಾಜ್ಯದ ಎಲ್ಲೆಡೆಯಿಂದ 1500 ಪುರುಷ, ಮಹಿಳೆಯರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್