


ಕೊಪ್ಪಳ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸರ್ವ ಸಮ್ಮತ ಉದ್ಯೋಗ ಸೃಷ್ಟಿಸಲು ಕಾರ್ಖಾನೆಯೇ ಬೇಕಾಗಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ನಗರಸಭೆ ಸಂಕೀರ್ಣದ ಮುಂದೆ ಜಂಟಿ ಕ್ರಿಯಾ ವೇದಿಕೆ (ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ) ಮೂಲಕ ಹಮ್ಮಿಕೊಂಡಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿ ಎಲ್ಲಾ ಕಾರ್ಖಾನೆಗಳ ವಿಸ್ತೀರ್ಣ ಮತ್ತು ಹೊಸದಾಗಿ ಆರಂಭವನ್ನು ವಿರೋಧಿಸಿ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹಕ್ಕೆ ಗಾಂಧೀಜಿ ಮತ್ತು ಬಾಬಾಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಅವರು ಚಾಲನೆ ನೀಡಿ, ಮಾತನಾಡಿದರು.
ಹಣ ಹೂಡಿಕೆ ಮಾಡುವದು ದೊಡ್ಡ ಸಂಗತಿ ಎಂದು ಭಾವಿಸಿರುವುದೇ ಬಹುದೊಡ್ಡ ತಪ್ಪು, ಹಣದ ಲೆಕ್ಕದಲ್ಲಿ ಜನರಿಗೆ ಬದುಕು ಸಿಗಲ್ಲ. ಜಿಂದಾಲ್ ನಂತಹ ಬೃಹತ್ ಕಾರ್ಖಾನೆ ಏನು ಹೇಳಿ ತೋರಣಗಲ್ಲುನಲ್ಲಿ ಬಂದಿದ್ದು, ಅಲ್ಲಿಯ ಜನ ಕಂಗಾಲಾಗಿದ್ದಾರೆ. ಅದು ಏನೇ ಇದ್ದರೂ ಉದ್ಯೋಗಕ್ಕಿಂತ ಮೊದಲು ಆರೋಗ್ಯ ಹಾಗೂ ಬದುಕು ಮುಖ್ಯ ಎಂದರು.
ರೈತ ಚಳವಳಿಯ ನಾಯಕ ಚಾಮರಸ ಮಾಲಿಪಾಟೀಲ್ ಅವರು, ಕಾರ್ಖಾನೆಗಳಿಂದ ಬರುತ್ತಿರುವ ಧೂಳು ಮತ್ತು ಹೊಗೆಯಿಂದ ಪರಿಸರ ವಿನಾಶವಾಗಿದೆ. ಬೆಳೆ ಹೋಗಿದೆ. ಬೆಳೆ ವಿಷಕಾರಿಯಾಗಿವೆ. ನದಿಯಿಂದ ನೀರನ್ನು ಹೇರಳವಾಗಿ ಬಳಸಿಕೊಂಡು ರೈತರಿಗೆ ಎರಡನೆ ಬೆಳೆಗೆ ನೀರಿಲ್ಲ. ಕುಡಿಯುವ ನೀರು ಮಲಿನವಾಗಿವೆ ಎಂದು ಅವರು ಟೀಕಿಸಿದರು. ಕೊಪ್ಪಳದ ಗವಿಮಠದ ಶ್ರೀಗಳು ಕೈಗಾರಿಕೆ ವಿರೋಧಿಸಿ ಚಳವಳಿಯ ನೇತೃತ್ವವಹಿಸಿಕೊಳ್ಳಬೇಕು ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಅವರು, ಸ್ವಾತಂತ್ರ್ಯ ಪಡೆದು 75 ವರ್ಷಗಳ ನಂತರ ಮತ್ತೆ ಮತ್ತೆ ಹೋರಾಟ ಮಾಡಬೇಕಿರುವದು ದುರಂತ. ಗಾಂಧೀಜಿ ಅವರು ಬ್ರಿಟೀಷರಿಂದ ಸ್ವಾತಂತ್ರ್ಯವನ್ನು ಕೊಡಿಸಿದರೆ ಬದುಕುವ ಸ್ವಾತಂತ್ರ್ಯವನ್ನು ಕೊಟ್ಟ ಬಾಬಾಸಾಹೇಬರ ಆದರ್ಶದೊಂದಿಗೆ ಮುಂದುವರಿಯಬೇಕಿದೆ. ಇಲ್ಲಿ ಕೇವಲ ನಾವು ಹೋರಾಟಗಾರರಷ್ಟೇ ಅಲ್ಲ ಎಲ್ಲರೂ ಬದುಕುತ್ತಿದ್ದೇವೆ ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಬರಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆವಹಿಸಿಕೊಂಡ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು, ಕೂಗಳತೆ ದೂರದಲ್ಲಿ ಅರ್ಧ ಲಕ್ಷ ಕೋಟಿ ಹಣದಲ್ಲಿ ಕಾರ್ಖಾನೆ ಮಾಡಲು ಹೊರಟಿರುವದು ನಮ್ಮ ಉದ್ಧಾರಕ್ಕಲ್ಲ ಅದು ಅವರ ಲಾಭಕ್ಕೆ ಎಂಬ ಅರಿವು ನಮಗೆ ಇರಬೇಕಿದೆ. ಕೊಪ್ಪಳ ಜಿಲ್ಲಾ ಹೋರಾಟ ಮಾಡುವಾಗಲೂ ಸಹ ಯಾವ ರಾಜಕಾರಣಿ ಇರಲಿಲ್ಲ ಮತ್ತು ದೊಡ್ಡ ಸಂಖ್ಯೆಯ ಜನ ಇರಲಿಲ್ಲ, ಆದರೂ ಒಂದು ದಿನ ನಾವು ಗೆದ್ದಿದ್ದೇವೆ, ಈಗಲೂ ನಾವು ಈ ಹೋರಾಟ ಮಾಡುತ್ತಿದ್ದೇವೆ, ಗೆದ್ದೇ ಗೆಲ್ಲುತ್ತೇವೆ ಎಂದರು.
ಹಿರಿಯ ಸಾಹಿತಿ ಎ.ಎಂ. ಮದರಿ, ಮಹಿಳಾ ಹೋರಾಟಗಾರ್ತಿ ಶಶಿಕಲಾ, ಜಂಟಿ ಕ್ರಿಯಾ ವೇದಿಕೆ ಹೋರಾಟ ಸಂಚಾಲಕರಾದ ಕೆ.ಬಿ. ಗೋನಾಳ, ಡಿ.ಹೆಚ್. ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಮಹಾಂತೇಶ ಕೊತಬಾಳ, ನಜೀರಸಾಬ್ ಮೂಲಿಮನಿ, ಶರಣು ಗಡ್ಡಿ, ಎಸ್.ಎ. ಗಫಾರ್, ಬಸವರಾಜ ಶೀಲವಂತರ, ಎಸ್.ಬಿ. ರಾಜೂರ, ರವಿ ಕಾಂತನವರ, ಚಿಟ್ಟಿಬಾಬು ಸಿಂಧನೂರು, ಭೀಮಸೇನ ಕಲಿಕೇರಿ, ಶರಣು ಪಾಟೀಲ್, ಹನುಮಂತಪ್ಪ, ಬಸವರಾಜ ಯರದಿಹಾಳ, ಮೂಕಣ್ಣ ಮೇಸ್ತ್ರಿ, ಮಂಗಳೇಶ ರಾಠೋಡ, ಬಸವರಾಜ ನರೆಗಲ್, ರಮೇಶ ಪಾಟೀಲ್ ಬೇರಿಗಿ, ಗವಿಸಿದ್ದಪ್ಪ ಹಲಿಗಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಹಾದೇವಪ್ಪ ಮಾವಿನಮಡು, ದುರುಗೇಶ ಹಿರೇಮನಿ ವಟಪರ್ವಿ, ಸುಂಕಮ್ಮ ಗಾಂಧಿನಗರ, ಭೀಮಪ್ಪ ಯಲಬುರ್ಗಾ, ಚನ್ನಬಸಪ್ಪ ಅಪ್ಪಣ್ಣವರ ಅನೇಕರಿದ್ದರು.
ಅಶೋಕ ವೃತ್ತದಲ್ಲಿ ಪ್ರತಿಭಟನಾರ್ಥವಾಗಿ ಘೋಷಣೆ ಹಾಕಿ ಅಲ್ಲಿಂದ ಮೆರವಣಿಗೆ ಮೂಲಕ ನಗರಸಭೆ ಮುಂದೆ ಬಂದು ಧರಣಿ ನಡೆಸಿದರು. ನಾಳೆ ಕೊಪ್ಪಳದ ಕಲ್ಯಾಣ ನಗರ ನಿವಾಸಿಗಳು ಪ್ರತಿಭಟನೆ ಮಾಡುವರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್