ಮಾನವಿಕ ವಿಷಯಗಳ ಅಧ್ಯಯನದಿಂದ ಸಮಾಜದ ಬಹುತ್ವ ಅರಿವು ಸಾಧ್ಯ
ಮಾನವಿಕ ವಿಷಯಗಳ ಅಧ್ಯಯನದಿಂದ ಸಮಾಜದ ಬಹುತ್ವ ಅರಿವು ಸಾಧ್ಯ
ಚಿತ್ರ : ಕೋಲಾರದಲ್ಲಿ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ಹಾಗೂ ತೋಟಗಾರಿಕಾ ಮಹಾವಿಶ್ವವಿದ್ಯಾಲಯ, ಕೋಲಾರ ಇವರ ಸಹಯೋಗದಲ್ಲಿ ೩ ದಿನಗಳು (ಅಕ್ಟೋಬರ್ ೩೧ರಿಂದ ನವೆಂಬರ್ ೨ರವರೆಗೆ) ಹಮ್ಮಿಕೊಳ್ಳಲಾದ ೧೬ನೇ ಅಂತರ ವಿಶ್ವವಿದ್ಯಾಲಯ ಯುವಜನೋತ್ಸವವನ್ನು ಖ್ಯಾತ ಸಾಹಿತಿಗಳು ಹಾಗೂ ಚಲನಚಿತ್ರ ನಿರ್ದೇಶಕರಾದ ಡಾ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು


ಕೋಲಾರ, ೩೧ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೃತಕ ಬುದ್ದಿಮತ್ತೆ, ಹೊಸ ತಂತ್ರಜ್ಞಾನಕ್ಕೆ ನಾವು ಹೆಚ್ಚು ಉತ್ತೇಜನ ನೀಡಿದರೆ ಮುಂದೊಂದು ದಿನ ಮನುಷ್ಯ ಸಂಬಂಧಗಳು ನಾಶವಾಗುವುದರಲ್ಲಿ ಸಂಶಯವಿಲ್ಲ. ಮಾನವಿಕ ವಿಷಯಗಳ ಅಧ್ಯಯನದಿಂದ ಸಮಾಜದ ಬಹುತ್ವ ಅರಿವು ಸಾಧ್ಯ ಎಂದು ಖ್ಯಾತ ಸಾಹಿತಿಗಳು ಹಾಗೂ ಚಲನಚಿತ್ರ ನಿರ್ದೇಶಕರಾದ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವೇದಿಕೆಯಲ್ಲಿ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ಹಾಗೂ ತೋಟಗಾರಿಕಾ ಮಹಾವಿಶ್ವವಿದ್ಯಾಲಯ, ಕೋಲಾರ ಇವರ ಸಹಯೋಗದಲ್ಲಿ ೩ ದಿನಗಳು (ಅಕ್ಟೋಬರ್ ೩೧ರಿಂದ ನವೆಂಬರ್ ೨ರವರೆಗೆ) ಹಮ್ಮಿಕೊಳ್ಳಲಾದ ೧೬ನೇ ಅಂತರ ವಿಶ್ವವಿದ್ಯಾಲಯ ಯುವಜನೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಯುವಜನರು ಒಳಿತು ಕೆಡಕುಗಳ ನಡುವಿನ ಸಂಘರ್ಷದಲ್ಲಿ ಧೃತಿಗೆಡದೆ ಜೀವನದಲ್ಲಿ ಒಳ್ಳೆಯ ಸಾಧನೆಯನ್ನು ಮಾಡಬೇಕು. ಶಿಕ್ಷಣ ಇಂದು ಹಳ್ಳಿ ಹಳ್ಳಿಗೂ ಬಂದು ಜನರು ಅಕ್ಷರಸ್ಥರಾಗುತ್ತಿದ್ದಾರೆ. ವಿದ್ಯಾವಂತರ ಬಾಯಲ್ಲಿ ಮಾತ್ರ ಸಾಹಿತ್ಯ ಹೊರಬರದೆ, ಇಂದು ಅನಕ್ಷರಸ್ಥನೂ ಸಾಹಿತ್ಯವನ್ನು ವಾಚಿಸಬಲ್ಲವನಾಗಿದ್ದಾನೆ ಎಂದರು.

ಇಂದು ನಿರುದ್ಯೋಗ, ಸಾಮಾಜಿಕ, ಆರ್ಥಿಕ ಸಮಸ್ಯೆಗಳು ಯುವಜನತೆಯನ್ನು ಹೆಚ್ಚಾಗಿ ಕಾಡುತ್ತಿದೆ. ಇವರ ಸಮಸ್ಯೆಗಳನ್ನು ಸಕಾರಗೊಳಿಸುವ ದೇಶ ಇರಬೇಕು. ಯುವಜನರು ತಾವು ಕಂಡ ಕನಸನ್ನು ನನಸು ಮಾಡುವ ಛಲ ತೊಡಬೇಕು. ಹಿಂದೆ ಶಿಕ್ಷಣ ತಜ್ಞರಿದ್ದ ಶಿಕ್ಷಣ ಸಂಸ್ಥೆಗಳಲ್ಲಿ ಈಗ ಶಿಕ್ಷಣೋದ್ಯಮಿಗಳಿದ್ದಾರೆ. ಇಂದು ದೇಶದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. ೬೦ರಷ್ಟು ಜನ ಬಿಸಿನೆಸ್ ಮ್ಯಾನೇಜ್ಮೆಂಟ್, ಶೇ. ೩೦ರಷ್ಟು ಜನ ತಂತ್ರಜ್ಞಾನ ಆಯ್ದುಕೊಂಡರೆ, ಕೇವಲ ಶೇ. ೫ರಷ್ಟು ಮಂದಿ ಮಾತ್ರ ಮಾನವಿಕ ವಿಜ್ಞಾನಗಳನ್ನು ಓದುತ್ತಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕು. ಏಕೆಂದರೆ ಸಾಹಿತ್ಯ, ಇತಿಹಾಸ, ರಾಜಕೀಯ ಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ಅರಿವು ಇಲ್ಲದೆ ಮನುಷ್ಯ ಪರಿಪೂರ್ಣತೆಯ ಕಡೆಗೆ ಸಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಶಿಕ್ಷಣ ಮೌಲ್ಯಾಧಾರಿತವಾಗಬೇಕೇ ವಿನ: ಮಾರುಕಟ್ಟೆಯಾಗಬಾರದು ಎಂದು ನುಡಿದರು. ತಂತ್ರಜ್ಞಾನದಿಂದ ಇಂದು ಅನೇಕ ದುಷ್ಪರಿಣಾಮ ನಾವು ಕಾಣುತ್ತೇವೆ. ಇದರ ಉಪಯೋಗವನ್ನು ಒಳಿತರ ಕಡೆಗೆ ನಾವು ಮಾಡಬೇಕು. ತಂತ್ರಜ್ಞಾನ ಮನುಕುಲಕ್ಕೆ ಸಹಕಾರಿಯಾಗಬೇಕೇ ವಿನ: ಮಾರಕವಾಗಬಾರದು. ಆರೋಗ್ಯಕರ, ಮಾನವೀಯ ಸಮಾಜ ನಿರ್ಮಿಸುವುದರಲ್ಲಿ ಯುವಜನರ ಪಾತ್ರ ಬಹಳ ಹಿರಿದು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಎಂ.ಆರ್. ರವಿ ಮಾತನಾಡಿ ಕೋಲಾರ ಜಿಲ್ಲೆಯ ಚಿನ್ನ, ಮಾವು, ಹಾಲು ರೇಷ್ಮೆಯನ್ನು ನೀಡುವುದರೊಂದಿಗೆ ಇಡೀ ದೇಶಕ್ಕೆ ಮಾದರಿಯಾಗಿದೆ. ಇಲ್ಲ ನದಿ ಮೂಲ ಇಲ್ಲದಿದ್ದರೂ ಸಹ ಮೂರು ಸಾವಿರಕ್ಕೂ ಅಧಿಕ ಕೆರೆಗಳಿದ್ದು, ರೈತರಿಗೆ ಸಹಕಾರಿಯಾಗಿದೆ. ಇಲ್ಲಿ ಬೆಳೆಯುವ ಟೊಮೊಟೋ ಜಗತ್ಪ್ರಸಿದ್ಧವಾಗಿದೆ. ಇಲ್ಲಿನ ರೈತರು ಶ್ರಮಿಕರಾಗಿದ್ದು, ಲಭ್ಯವಿರುವ ಸಂಪನ್ಮೂಲದಿಂದ ಒಳ್ಳೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎಂದರು.

ತಂತ್ರಜ್ಞಾನದಿಂದ ಒಳಿತು-ಕೆಡಕು ಎರಡೂ ಇದ್ದು, ಅವನ್ನು ಯಾವ ರೀತಿಯಲ್ಲಿ ಉಪಯೋಗ ಮಾಡಿ ಕೊಳ್ಳಬೇಕೆಂಬುದರ ಬಗ್ಗೆ ಯುವಜನರಿಗೆ ಜಾಗೃತಿ ಇರುಬೇಕು. ತಂತ್ರಜ್ಞಾನವನ್ನು ಸಾಮಾಜಿಕ ಹಿತಕ್ಕೆ ಬಳಸಬೇಕೇ ವಿನ: ವಿನಾಶಕ್ಕಲ್ಲ. ಇಂದಿನ ಯುವಜನರು ವಿಸ್ತಾರ ಓದಿಗೆ ಆಸಕ್ತಿ ವಹಿಸಿ ಜೀವನದಲ್ಲಿ ಸಫಲತೆ ಕಾಣಬೇಕೆಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ನಿಖಿಲ್.ಬಿ ಮಾತನಾಡಿ ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೈತರಿಗೆ ಹೊಸ ತಂತ್ರಜ್ಞಾನಗಳನ್ನು ಆವಿಷ್ಕಾರ ಮಾಡುವುದರ ಮೂಲಕ ತಾಂತ್ರಿಕ ಬೆಳವಣಿಗೆಗೆ ನಾಂದಿ ಹಾಕಬೇಕು. ಕೃಷಿ ಹಾಗೂ ತೋಟಗಾರಿಕೆ ಈ ಜಿಲ್ಲೆಯ ರೈತರ ಜೀವಾಳ. ಅಲ್ಲದೆ ಕೋಲಾರ ಜಿಲ್ಲೆ ವಿಶಿಷ್ಠ ಜನಪದ ಕಲೆಗಳಿಗೆ ಸಹ ಹೆಸರುವಾಸಿಯಾಗಿದೆ .ಮುಳಬಾಗಿಲು ತಾಲ್ಲೂಕಿನ ಪಾಪಮ್ಮ ತಮಗೆ ವಿದ್ಯಾಭ್ಯಾಸ ಇಲ್ಲದಿದ್ದರೂ ಬಿತ್ತನೆ ಬೀಜ ಸಂಗ್ರಹಿಸಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರಲ್ಲದೆ ಎಲ್ಲಾ ಜನರು ಹೆಲ್ಮೆಟ್ನ್ನು ಕಡ್ಡಾಯವಾಗಿ ಧರಿಸಿ ಪ್ರಾಣಹಾನಿ ತಡೆಯಬೇಕೆಂದು ಸಭಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ ಬಾಗೇವಾಡಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ಕುಲಪತಿಗಳಾದ ಡಾ.ವಿಷ್ಣುವರ್ಧನ್, ಡೀನ್ ಡಾ. ರಾಮಚಂದ್ರ ನಾಯ್ಕ.ಕೆ , ತೋಟಗಾರಿಕೆ ಮಹಾವಿದ್ಯಾಲಯ ಕೋಲಾರದ ಡೀನ್ ಡಾ.ರಾಘವೇಂದ್ರ.ಕೆ.ಮೇಸ್ತ, ವ್ಯವಸ್ಥಾಪನ ಮಂಡಳಿ ಸದಸ್ಯರಾದ ಹೆಚ್.ಕೆ.ಮನೋಹರ್, ನಾಚೇಗೌಡ, ಶ್ರೀನಿವಾಸ್ ಗೌಡ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಗಣ್ಯರು ಕಲಾಶೃಂಗ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ ಯುವಜನೋತ್ಸವ ಸ್ಮರಣ ಸಂಚಿಕೆ ಹಾಗೂ ಸಾಧನೆಯ ಕೈಪಿಡಿ ಬಿಡುಗಡೆ ಮಾಡಿದರು.

ಚಿತ್ರ : ಕೋಲಾರದಲ್ಲಿ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ಹಾಗೂ ತೋಟಗಾರಿಕಾ ಮಹಾವಿಶ್ವವಿದ್ಯಾಲಯ, ಕೋಲಾರ ಇವರ ಸಹಯೋಗದಲ್ಲಿ ೩ ದಿನಗಳು (ಅಕ್ಟೋಬರ್ ೩೧ರಿಂದ ನವೆಂಬರ್ ೨ರವರೆಗೆ) ಹಮ್ಮಿಕೊಳ್ಳಲಾದ ೧೬ನೇ ಅಂತರ ವಿಶ್ವವಿದ್ಯಾಲಯ ಯುವಜನೋತ್ಸವವನ್ನು ಖ್ಯಾತ ಸಾಹಿತಿಗಳು ಹಾಗೂ ಚಲನಚಿತ್ರ ನಿರ್ದೇಶಕರಾದ ಡಾ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande