
ಗದಗ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತ ದೇಶದಲ್ಲಿ ದಂಡೆತ್ತಿ ಬಂದ ದಾಳಿಕಾರರನ್ನು ಎದುರಿಸಿ ಅವರನ್ನು ಸೋಲಿಸಿ ಹಿಂದೂ ಧರ್ಮವನ್ನು ರಕ್ಷಣೆ ಮಾಡುವಲ್ಲಿ ಎಸ್‍ಎಸ್‍ಕೆ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಬಿಜೆಪಿ ಪ್ರಕೋಷ್ಟದ ಜಿಲ್ಲಾ ಸಹ ಸಂಯೋಜಕರಾದ ರಮೇಶ ಸಜ್ಜಗಾರ ಅವರು ಹೇಳಿದರು.
ಗದಗ ನಗರದ ಜೋಡ ಮಾರುತಿ ದೇವಸ್ಥಾನದ ಎದುರಿಗೆ ವಾರ್ಡ ನಂ. 31 ರ ಕಿಲ್ಲಾ ಓಣಿಯಲ್ಲಿ ಎಸ್‍ಎಸ್‍ಕೆ ಸಮಾಜ ಬಾಂಧವರು ಹಮ್ಮಿಕೊಂಡ ಸಹಸ್ರಾರ್ಜುನ ಮಹಾರಾಜರ ಜಯಂತಿಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಭಾರತವು ಶಾಂತಿಯ ನೆಲವಿಡು, ಸಾಮರಸ್ಯ ಹೊಂದಿದ ದೇಶದಲ್ಲಿ ಸಹಸ್ರಾರ್ಜುನ ಮಹಾರಾಜರು ಜನಿಸಿರುವದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಎಸ್‍ಎಸ್‍ಕೆ ಸಮಾಜ ಬಾಂಧವರು ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಅಚ್ಚುಕಟ್ಟಾಗಿ ಮಾಡುವ ಮೂಲಕ ಹಿಂದೂ ಧರ್ಮವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ನನ್ನ ಒಡನಾಟವು ಎಸ್‍ಎಸ್‍ಕೆ ಸಮಾಜದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇರುವದರಿಂದ ನಾನು ಅವರ ಹಿಂದೂ ಧರ್ಮದ ಆಚರಣೆಗಳನ್ನು ನೋಡಿ ಸಂತಸಪಟ್ಟಿದ್ದೆನೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಶಹರ ಪೊಲೀಸ್ ಠಾಣೆಯ ಸಿಪಿಐ ಡಿ.ಬಿ.ಪಾಟೀಲ ಅವರು ಮಾತನಾಡಿ, ಎಸ್‍ಎಸ್‍ಕೆ ಸಮಾಜ ಬಾಂಧವರು ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಅತ್ಯಂತ ಶಿಸ್ತು ಮತ್ತು ಶಾಂತಿಯುತವಾಗಿ ಆಚರಿಸಿಕೊಂಡು ಬಂದಿರುವದು ಎಲ್ಲರ ಮೆಚ್ಚುಗೆ ಪಡೆದಿದೆ. ಇದೇ ರೀತಿ ಎಲ್ಲ ಸಮುದಾಯಗಳು ದಾರ್ಶನಿಕ ಮಹಾಪುರುಷರ ಜಯಂತಿಗಳನ್ನು ಇದೇ ರೀತಿ ಶಾಂತಿಯುತವಾಗಿ ಆಚರಿಸುವ ಮೂಲಕ ಗದಗ ಜಿಲ್ಲೆಯನ್ನು ಮಾದರಿಯನ್ನಾಗಿ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸುಧೀರ ಕಾಟಿಗರ, ಓಣಿಯ ಹಿರಿಯರಾದ ಪರಶುರಾಮಸಾ ಬದಿ, ರಾಜು ಕಾಟಿಗರ, ಮೇಘರಾಜಸಾ ಬಾಕಳೆ, ವೆಂಕಟೇಶ ಬಾಂಡಗೆ, ಬಾಬು ಕಾಟಿಗರ, ಮಾಧು ಬದಿ, ಪ್ರಕಾಶ ಕಾಟಿಗರ, ಸುನೀಲ ಬಸವಾ, ಗಜಾನನ ಹಬೀಬ, ಚೇತನ ಲದ್ವಾ, ನಾರಾಯಣ ಟಿಕಣದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀಕಾಂತ ಬಾಕಳೆ ಅವರು ನಿರೂಪಿಸಿದರು. ರವಿ ಚವ್ಹಾಣ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP