
ಗದಗ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಸನಗೌಡ. ಕೆ. ನಿಂಬನಗೌಡರ ಅವರು ತಮ್ಮ ಸೇವೆಯುದ್ದಕ್ಕೂ ಶಿಸ್ತನ್ನು ಮೈಗೂಡಿಸಿಕೊಂಡು ಕಾಯಕಜೀವಿಗಳಾಗಿ ಬದುಕಿದವರು. ಎಲ್ಲರೊಂದಿಗೆ ಸಮಾನಮನೋಭಾವ ತಳೆದಿರುವ ಇವರು ತಮ್ಮ ಹಾಸ್ಯ ಚಟಾಕಿಯಿಂದ ಸುತ್ತಮುತ್ತಲಿನವರೆಲ್ಲರನ್ನೂ ಖುಷಿಪಡಿಸುತ್ತ ಬಂದಿರುವ ಇವರು ಅತ್ಯಂತ ಚಿರಪರಿಚಿತರು. ಸರಳ ಸಜ್ಜನಿಕೆಯ ಆದರ್ಶ ಕ್ರಾಪ್ಟ್ ವೃತ್ತಿ ಶಿಕ್ಷಕರಾಗಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಮಾದರಿ ಶಿಕ್ಷಕರಾಗಿ ಉತ್ತಮ ರೀತಿಯಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ.
ಬಿ. ಕೆ. ನಿಂಬನಗೌಡರ ಇವರು ಅಕ್ಟೋಬರ್ 5, 1965 ರಂದು ಜನಿಸಿದರು. ಬಾಲ್ಯದಲ್ಲಿಯೇ ಚಿತ್ರಕಲೆ ಕ್ರಾಪ್ಟ್ ಕಲೆಯ ಬಗ್ಗೆ. ಹೆಚ್ಚಿನ ಆಸಕ್ತಿ ಹೊಂದಿದವರಾಗಿದ್ದರು. ವೈಜ್ಞಾನಿಕ ಮನೋಭಾವನೆಯುಳ್ಳವರಾಗಿದ್ದರು. ಜೆ.ಟಿ.ವಿ.ಪಿ. ಶಿಕ್ಷಣ ಸಂಸ್ಥೆಯ ಅನುದಾನಿತ ಜಗದ್ಗುರು ತೋಂಟದಾರ್ಯ ಪ್ರೌಢಶಾಲೆಯಲ್ಲಿ ಜುಲೈ 18, 1986 ರಂದು ಕ್ರಾಪ್ಟ್ ವೃತ್ತಿ ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿದರು. ಡಂಬಳದಲ್ಲಿ 21 ವರ್ಷಗಳವರೆಗೆ, ಹಾಗೂ ಗದಗದ ಸಿದ್ದಲಿಂಗ ನಗರ ಬಸವೇಶ್ವರ ಪ್ರೌಢಶಾಲೆಯಲ್ಲಿ, 18 ವರ್ಷಗಳವರೆಗೆ, ಕ್ರಾಪ್ಟ್ ವೃತ್ತಿ ಶಿಕ್ಷಕರಾಗಿ, ಅತ್ಯುತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಒಟ್ಟು 39 ವರ್ಷಗಳವರೆಗೆ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಮನದಲ್ಲಿ ನೆಲೆಗೊಂಡಿದ್ದಾರೆ.
ಶಿಕ್ಷಣ : ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. 1982 ರಿಂದ 1985 ರವರೆಗೆ ಡಿ.ಎಂ.ಸಿ. ಕೋರ್ಸ್‍ನ್ನು ಹಾಗೂ ಸಿ.ಸಿ.ಟಿ. ಕ್ರಾಪ್ಟ್ ಟೀಚರ್ ಕೋರ್ಸ್‍ನ್ನು ಧಾರವಾಡದಲ್ಲಿ ಮುಗಿಸಿದರು. ಜುಲೈ 18, 1986 ರಲ್ಲಿ ಡಂಬಳ ಜೆ.ಟಿ.ಬಾಲಕರ ಪ್ರೌಢಶಾಲೆಯಲ್ಲಿ ಸೇವೆ ಪ್ರಾರಂಬಿಸಿದರು. ಜೂನ್ 1999 ರಲ್ಲಿ ಗದಗ ಬಸವೇಶ್ವರ ಪ್ರೌಢಶಾಲೆಗೆ ವರ್ಗಾವಣೆಯಾಗಿ ಅಲ್ಲಿ 18 ವರ್ಷಗಳವೆರೆಗೆ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಸಮಸ್ತ ವಿದ್ಯಾರ್ಥಿಬಳಗದ ಪ್ರೀತಿಗೆ ಪಾತ್ರರಾಗಿದ್ದಾರೆ. ಬಿ. ಕೆ. ನಿಂಬನಗೌಡರ ಅವರು ಅಕ್ಟೋಬರ್ 31, 2025 ರಂದು ನಿವೃತ್ತಿ ಹೊಂದುತ್ತಿದ್ದಾರೆ.
ಸಾಧನೆ : ದೀರ್ಘ ಕಾಲದವರೆಗೆ ಕ್ರಾಫ್ಟ್ ವೃತ್ತಿ ಶಿಕ್ಷಕರಾಗಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ 2007 ರಿಂದ ಕೆಲ ವರ್ಷಗಳವರೆಗೆ ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಸಹಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ನಂತರದಲ್ಲಿ ಗದಗ ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ನವ್ಹಂಬರ 2024 ರಿಂದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ರಾಜ್ಯ ಘಟಕ (ರಿ) ಹುಬ್ಬಳ್ಳಿ ಇದರ ಗದಗ ಜಿಲ್ಲಾ ಘಟಕ ವತಿಯಿಂದ ಗದಗ ಶಹರ ಘಟಕದ ನೂತನ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಕರಾದ ಬಿ. ಕೆ. ನಿಂಬನಗೌಡರ 31-10-2025 ರಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP