
ನವದೆಹಲಿ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : 2025–26ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಜಾರಿಗೆ ತಂದಿರುವ ಸುಧಾರಣೆಗಳು, ರಫ್ತು ಕ್ಷೇತ್ರದ ಪ್ರಗತಿ ಹಾಗೂ ಮುಂಬರುವ ನೀತಿ ಕ್ರಮಗಳ ಬಗ್ಗೆ ಚರ್ಚಿಸಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ನವದೆಹಲಿಯ ವಾಣಿಜ್ಯ ಭವನದಲ್ಲಿ ಪ್ರಮುಖ ರಫ್ತು ಉತ್ತೇಜನ ಮಂಡಳಿಗಳು ಮತ್ತು ಕೈಗಾರಿಕಾ ಸಂಘಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಈ ವೇಳೆ ಗೋಯಲ್ ಮಾತನಾಡಿ, ಭಾರತೀಯ ರಫ್ತುದಾರರಿಗೆ ಉತ್ತಮ ಜಾಗತಿಕ ಮಾರುಕಟ್ಟೆ ಪ್ರವೇಶ ಕಲ್ಪಿಸಲು ಹಾಗೂ ವ್ಯಾಪಾರ ಸುಗಮತೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ ಎಂದು ಹೇಳಿದರು. “ಭಾರತದ ರಫ್ತು ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಸರ್ಕಾರ ಎಲ್ಲಾ ಸಾಧ್ಯ ಕ್ರಮಗಳನ್ನು ಕೈಗೊಳ್ಳಲಿದೆ,” ಎಂದು ಅವರು ಉದ್ಯಮಿಗಳಿಗೆ ಭರವಸೆ ನೀಡಿದರು.
ಸಭೆಯಲ್ಲಿ ವಾಣಿಜ್ಯ ಇಲಾಖೆ, ಕಂದಾಯ ಇಲಾಖೆ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ, ವಿದೇಶಿ ವ್ಯಾಪಾರ ನಿರ್ದೇಶನಾಲಯ ಹಾಗೂ ಹಲವು ರಫ್ತು ಮಂಡಳಿಗಳು ಮತ್ತು ಕೈಗಾರಿಕಾ ಸಂಘಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa