

ಬೆಂಗಳೂರು, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತುಗೊಂಡಿದ್ದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಪಿಡಿಒ ಪ್ರವೀಣ್ ಕುಮಾರ್ ಅವರಿಗೆ ನ್ಯಾಯ ದೊರಕಿದೆ. ಕರ್ನಾಟಕ ಆಡಳಿತ ನ್ಯಾಯಮಂಡಳಿ ಸರ್ಕಾರ ಹೊರಡಿಸಿದ್ದ ಅಮಾನತು ಆದೇಶಕ್ಕೆ ತಡೆ ನೀಡಿದೆ.
ಕೆಎಟಿ ಆದೇಶದಿಂದ ಕರ್ನಾಟಕ ಸರಕಾರ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲು ಮುಂದಾಗಿದ್ದ ಕ್ರಮಕ್ಕೆ ಮತ್ತೊಂದು ಹಿನ್ನಡೆಯಾಗಿದೆ.
ಲಿಂಗಸುಗೂರಿನ ರೋಡಲಬಂಡಾ ಗ್ರಾಮದ ಪಿಡಿಒ ಪ್ರವೀಣ್ ಕುಮಾರ್ ಅವರು, ಅಕ್ಟೋಬರ್ 12 ರಂದು ಪಟ್ಟಣದಲ್ಲಿ ನಡೆದ ಆರ್‌ಎಸ್‌ಎಸ್ ಶತಮಾನೋತ್ಸವ ಪಥಸಂಚಲನದಲ್ಲಿ ಗಣವೇಷ ಧರಿಸಿ ಭಾಗವಹಿಸಿದ್ದರು.
ಈ ಹಿನ್ನೆಲೆ ಕರ್ನಾಟಕ ಸಿವಿಲ್ ಸೇವಾ ನಿಯಮ ಉಲ್ಲಂಘನೆ ಆರೋಪದಡಿ, ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಡಾ. ಅರುಂಧತಿ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಅಮಾನತು ವಿರುದ್ಧ ಪ್ರವೀಣ್ ಕೆಎಟಿ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ನ್ಯಾಯಮಂಡಳಿಯು ಅಮಾನತು ಕ್ರಮವನ್ನು ವಜಾಗೊಳಿಸಿ, ಅದು ರಾಜಕೀಯ ಪ್ರೇರಿತ ಕ್ರಮ ಎಂದು ಅಭಿಪ್ರಾಯ ನೀಡಿದೆ.
ಈ ಘಟನೆ ರಾಜಕೀಯ ಜಟಾಪಟಿಗು ಕಾರಣವಾಗಿತ್ತು. ಅಮಾನತು ಬಳಿಕ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪ್ರವೀಣ್ ಕುಮಾರ್ ಅವರನ್ನು ಭೇಟಿಯಾಗಿ, “ಇದು ಕಾನೂನುಬಾಹಿರ ಕ್ರಮ. ನ್ಯಾಯಾಲಯದಲ್ಲಿ ನ್ಯಾಯ ದೊರಕುವಂತೆ ವೈಯಕ್ತಿಕವಾಗಿ ಸಹಕಾರ ನೀಡುತ್ತೇನೆ” ಎಂದು ಭರವಸೆ ನೀಡಿದ್ದರು.
ಅವರ ಸಹಕಾರದೊಂದಿಗೆ ನಡೆದ ಕಾನೂನು ಹೋರಾಟದ ಫಲವಾಗಿ, ಈಗ ಕೆಎಟಿ ಸರ್ಕಾರದ ಅಮಾನತು ಆದೇಶಕ್ಕೆ ತಡೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa