
ಗದಗ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಕಲ ದಾನಗಳಲ್ಲಿ ಅನ್ನದಾನ ಶ್ರೇಷ್ಠವಾಗಿದೆ. ನಾವೆಷ್ಟೇ ಸಿರಿವಂತರಾದರೂ ಹಸಿದು ಬಂದವರಿಗೆ ಒಂದು ತುತ್ತು ಅನ್ನ ನೀಡದಿದ್ದರೆ ನಾವು ಗಳಿಸಿದ ಸಂಪತ್ತು ಶೂನ್ಯಕ್ಕೆ ಸಮಾನ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷ ರಾಜು ಗುಡಿಮನಿ ಹೇಳಿದರು.
ಗದಗ ನಗರದ ಮಹಾತ್ಮ ಗಾಂಧಿ ವೃತ್ತದ ಬಳಿಯ ಹಳೇ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಜೀವನದಲ್ಲಿ ದುಡ್ಡು ಗಳಿಸುವುದು ಮುಖ್ಯವಲ್ಲ. ಗಳಿಸಿದ ಹಣದಲ್ಲಿ ನಾವೆಷ್ಟು ಜನರಿಗೆ ಒಳ್ಳೆಯದನ್ನು ಮಾಡಿದ್ದೇವೆ ಎನ್ನುವುದು ಮುಖ್ಯವಾಗಿದೆ.
ನಗರದಲ್ಲಿ ಹಸಿದವರಿಗೆ ಅನ್ನ ನೀಡುವ ಮೂಲಕ ಪುಣ್ಯದ ಕೆಲಸ ಮಾಡುತ್ತಿರುವ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದ ಕಾರ್ಯ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ನಾವೆಲ್ಲ ಪದಾಧಿಕಾರಿಗಳು ಕೂಡ ಈ ಕಾರ್ಯಕ್ಕೆ ಸೇವೆ ಸಲ್ಲಿಸುತ್ತೇವೆ ಎಂದರು.
ರಾಷಪತಿ ಪದಕ ಪುರಸ್ಕೃತೆ ಪಿಎಸ್‌ಐ ಮಾರುತಿ ಜೋಗದಂಡಕರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಗದಗ ನಗರದಲ್ಲಿ ಹಸಿದು ಬಂದವರಿಗೆ ಕೇವಲ 5 ರೂ.ಗಳಲ್ಲಿ ಹೊಟ್ಟೆ ತುಂಬಾ ಊಟ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯವನ್ನು ನಿರಂತರವಾಗಿ ನಡೆಸುತ್ತ ಬಂದಿರುವ ಆಡಳಿತ ಮಂಡಳಿ ಸೇವೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಯದೇವ ಮೆಣಸಗಿ, ಪ್ರಕಾಶ ಉಗಲಾಟದ, ಸಹ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಶೋಕ ಸಂಕಣ್ಣವರ ಅವರನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಪ್ರಸಾದ ಅನ್ನಪೂರ್ಣೇಶ್ವರಿ ನಿಲಯದ ಗೌರವಾಧ್ಯಕ್ಷ ಎಸ್. ಎಸ್. ಕಳಸಾಪೂರ, ಉಪಾಧ್ಯಕ್ಷ ಉಮೇಶ ಪೂಜಾರ, ಹಿರಿಯರಾದ ಮರಿಗುದ್ದಿ, ಪತ್ರಿಮಠ, ಸದಸ್ಯರಾದ ರಾಜಣ್ಣ ಮಲ್ಲಾಡದ, ಮುತ್ತು ಜಡಿ. ಸಮಾಜ ಸೇವಕ ಎಚ್.ಬಿ. ಸಿಂಗ್ರಿ, ನಿಲಯದ ಮೇಲ್ವಿಚಾರಕಿ ವಿಶಾಲಾಕ್ಷಿ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು. ಪ್ರಸಾದ ನಿಲಯದ ಖಜಾಂಚಿ ವೆಂಕಟೇಶ ಇಮರಾಪೂರ ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP