
ಧಾರವಾಡ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಆರ್‌ಎಸ್‌ಎಸ್ ಸಂಘಟನೆ ಗುರಿಯಾಗಿಸಿ ಸರ್ಕಾರಿ ಆವರಣಗಳಲ್ಲಿ ಖಾಸಗಿ ಸಂಘಟನೆಗಳು ಅಥವಾ ಸಂಸ್ಥೆಗಳು ಯಾವುದೇ ಕಾರ್ಯಕ್ರಮ ನಡೆಸಲು ಮುಂಚಿತವಾಗಿ ಅನುಮತಿ ಪಡೆಯಬೇಕು ಎಂಬ ಕರ್ನಾಟಕ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿದೆ. ಈ ತೀರ್ಪಿನಿಂದ ಸರ್ಕಾರಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ.
ರಾಜ್ಯ ಸರ್ಕಾರವು ಅ.18 ರಂದು ಹೊರಡಿಸಿದ ಆದೇಶದ ಪ್ರಕಾರ, ಸರ್ಕಾರಿ ಆಸ್ತಿಗಳು, ಶಾಲೆಗಳು, ಕಾಲೇಜುಗಳು, ಪಾರ್ಕ್‌ಗಳು, ಆಟದ ಮೈದಾನಗಳು ಮತ್ತು ನೀರಿನ ತಡೆಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಕಾರ್ಯಕ್ರಮ ನಡೆಸಲು ಸಂಬಂಧಿತ ಅಧಿಕಾರಿಯಿಂದ ಮುಂಚಿತ ಅನುಮತಿ ಪಡೆಯಬೇಕು ಎಂದು ನಿಬಂಧನೆ ವಿಧಿಸಲಾಗಿತ್ತು.
ಈ ಆದೇಶವನ್ನು ಪುನಶ್ಚೇತನ ಸೇವಾ ಸಂಸ್ಥೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸಂಸ್ಥೆಯ ವಾದ ಪ್ರಕಾರ, ಸರ್ಕಾರದ ಆದೇಶವು ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಚಟುವಟಿಕೆಗಳನ್ನು ಗುರಿಯಾಗಿಸಿ ರಾಜಕೀಯ ದ್ವೇಷದಿಂದ ಹೊರಡಿಸಲಾಗಿದೆ. ಇದು ಸಂವಿಧಾನದ ಮೂಲಭೂತ ಹಕ್ಕುಗಳಾದ ಆರ್ಟಿಕಲ್ 19(1)(a) (ಭಾಷಣ ಸ್ವಾತಂತ್ರ್ಯ) ಮತ್ತು 19(1)(c) (ಸಂಘ ರಚನೆ ಸ್ವಾತಂತ್ರ್ಯ) ಉಲ್ಲಂಘನೆಯಾಗಿದೆ ಎಂದು ಸಂಸ್ಥೆ ಹೇಳಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿ, ಸರ್ಕಾರದ ಆದೇಶದ ಜಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸರ್ಕಾರ, ಗೃಹ ಇಲಾಖೆ ಹಾಗೂ ಹುಬ್ಬಳ್ಳಿ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
“ಸಂವಿಧಾನ ನೀಡಿರುವ ಹಕ್ಕುಗಳನ್ನು ಸರ್ಕಾರಿ ಆದೇಶದ ಮೂಲಕ ಕಿತ್ತುಕೊಳ್ಳಲಾಗದು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಘ ರಚನೆ ಹಕ್ಕುಗಳು ನಾಗರಿಕರ ಮೂಲಭೂತ ಹಕ್ಕುಗಳಾಗಿವೆ” ಎಂದು ಪೀಠ ತನ್ನ ಪ್ರಾಥಮಿಕ ಅಭಿಪ್ರಾಯದಲ್ಲಿ ಹೇಳಿದೆ
ಸರ್ಕಾರದ ಆದೇಶದ ಪ್ರಕಾರ, ಅನುಮತಿಯಿಲ್ಲದೇ 10 ಜನರು ಸೇರಿದರೆ ಅದನ್ನೂ ಅಪರಾಧವೆಂದು ಪರಿಗಣಿಸಲಾಗಿತ್ತು. ರಸ್ತೆ, ಪಾರ್ಕ್, ಮೈದಾನ ಮತ್ತು ಕೆರೆಗಳ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಪೊಲೀಸ್ ಕಾಯ್ದೆ 1963ರಡಿ ಅಧಿಕಾರವನ್ನು ಸರ್ಕಾರ ಚಲಾಯಿಸಿತ್ತು.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 17ಕ್ಕೆ ಮುಂದೂಡಿದೆ. ಸರ್ಕಾರದ ಪರ ವಕೀಲರಿಗೆ ಅ.29ರೊಳಗೆ ತಕರಾರು ಸಲ್ಲಿಸುವಂತೆ ಸೂಚನೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa