
ನವದೆಹಲಿ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕಳೆದ 11 ವರ್ಷಗಳಲ್ಲಿ ಭಾರತದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಅವರು ಶನಿವಾರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ 50ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು,
ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 2014ರಲ್ಲಿ 387 ಇದ್ದು, ಈಗ 819ಕ್ಕೆ ಏರಿದೆ ಎಂದು ಹೇಳಿದರು. ಇದೇ ಅವಧಿಯಲ್ಲಿ ಪದವಿಪೂರ್ವ ಸೀಟುಗಳು 51,000ರಿಂದ 1.29 ಲಕ್ಷಕ್ಕೆ ಮತ್ತು ಸ್ನಾತಕೋತ್ತರ ಸೀಟುಗಳು 31,000ರಿಂದ 78,000ಕ್ಕೆ ಏರಿಕೆ ಕಂಡಿವೆ. ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿ 75,000 ಸೀಟುಗಳನ್ನು ಸೇರಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಭಾರತದ ಸಾಧನೆಗಳನ್ನು ಉಲ್ಲೇಖಿಸಿದ ನಡ್ಡಾ, ತಾಯಂದಿರ ಮರಣ ಪ್ರಮಾಣ 130ರಿಂದ 88ಕ್ಕೆ, ಶಿಶು ಮರಣ ಪ್ರಮಾಣ 39ರಿಂದ 27ಕ್ಕೆ ಇಳಿದಿದೆ ಎಂದು ಹೇಳಿದರು. ಐದು ವರ್ಷದೊಳಗಿನ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ಕ್ರಮವಾಗಿ ಶೇ. 42 ಮತ್ತು ಶೇ. 39 ರಷ್ಟು ಕಡಿಮೆಯಾಗಿದೆ, ಇದು ಜಾಗತಿಕ ಸರಾಸರಿಗಿಂತ ಉತ್ತಮವಾದ ಪ್ರದರ್ಶನವಾಗಿದೆ ಎಂದು ಅವರು ವಿವರಿಸಿದರು. ಟಿಬಿ ಪ್ರಕರಣಗಳು ಶೇ. 17.7 ರಷ್ಟು ಕಡಿಮೆಯಾಗಿದ್ದು, ಇದು ವಿಶ್ವ ಸರಾಸರಿ ಇಳಿಕೆಯ ದರವಾದ ಶೇ. 8.3 ಕ್ಕಿಂತ ಎರಡರಷ್ಟು ಹೆಚ್ಚು ಎಂದು ನಡ್ಡಾ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa