ಮುಂಬಯಿ, 21 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಾಲಿವುಡ್‌ನ ಹಿರಿಯ ನಟ ಹಾಗೂ ನಿರ್ದೇಶಕ ಅಸ್ರಾನಿ ಸೋಮವಾರ ಸಂಜೆ 84ನೇ ವಯಸ್ಸಿನಲ್ಲಿ ಮುಂಬೈನ ಆರೋಗ್ಯ ನಿಧಿ ಆಸ್ಪತ್ರೆಯಲ್ಲಿ ನಿಧನರಾದರು. ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಸಾಂತಾಕ್ರೂಜ್‌ನ ಶಾಸ್ತ್ರಿ ನಗರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಸ್ರಾನಿಯವರು ನಿಧನಕ್ಕೂ ಕೆಲವೇ ಗಂಟೆಗಳ ಮೊದಲು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ದೀಪಾವಳಿ ಶುಭಾಶಯ ಹಂಚಿಕೊಂಡಿದ್ದರು. ವರದಿಗಳ ಪ್ರಕಾರ, ಅವರು ನಿಧನಕ್ಕೂ ಮುನ್ನ ಪತ್ನಿ ಮಂಜು ಅಸ್ರಾನಿಗೆ ತಮ್ಮ ನಿಧನದ ವಿಚಾರವನ್ನು ರಹಸ್ಯವಾಗಿಡುವಂತೆ ತಿಳಿಸಿದ್ದಾರೆ.
1960ರ ದಶಕದಿಂದ ಚಲನಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅಸ್ರಾನಿ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಹಾಸ್ಯ ಹಾಗೂ ಗಂಭೀರ ಪಾತ್ರಗಳಲ್ಲಿ ತನ್ನ ಛಾಪು ಮೂಡಿಸಿದ್ದರು. “ಶೋಲೆ”ಯ ಜೈಲರ್ ಪಾತ್ರದ ಮೂಲಕ ಅವರು ಅಮರರಾದರು. “ಮೇರೆ ಅಪ್ನೆ”, “ಬಾವರ್ಚಿ”, “ಚುಪ್ಕೆ ಚುಪ್ಕೆ”, “ಭೂಲ್ ಭುಲೈಯಾ”, “ಧಮಾಲ್” ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.
1941ರಲ್ಲಿ ಜೈಪುರದಲ್ಲಿ ಜನಿಸಿದ ಅಸ್ರಾನಿ, ರಂಗಭೂಮಿಯಿಂದ ಸಿನಿರಂಗ ಪ್ರವೇಶಿಸಿ ನಿರ್ದೇಶಕರಾಗಿ ಸಹ ಹೆಸರು ಗಳಿಸಿದ್ದರು. ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಶೂನ್ಯ ಉಂಟಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa