ಗದಗ, 21 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಅನ್ನದಾತರು ಮತ್ತೆ ಆರ್ಥಿಕ ಸಂಕಷ್ಟದ ಅಂಚಿನಲ್ಲಿ ನಿಂತಿದ್ದಾರೆ. ಈರುಳ್ಳಿ ಕತ್ತರಿಸುವಾಗ ಕಣ್ಣೀರು ತರಿಸುವ ಈರುಳ್ಳಿ ಈಗ ರೈತರ ಜೀವನವನ್ನೇ ಕಣ್ಣೀರುಗೊಳಿಸಿದೆ. ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕೆ ಕುಸಿದ ಪರಿಣಾಮ, ಶ್ರಮ, ಬೆವರು ವ್ಯರ್ಥವಾಗುತ್ತಿದೆ.
ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಭಾರಿ ನಿರಾಶೆಯಾಗಿದೆ. ಒಂದು ಕ್ವಿಂಟಲ್ ಈರುಳ್ಳಿ ₹200 ರಿಂದ ₹600 ರವರೆಗೆ ಮಾತ್ರ ಮಾರಾಟವಾಗಿದೆ. ಈ ಬೆಲೆಯನ್ನು ಕೇಳಿದ ರೈತರು ನೇರವಾಗಿ ಆಕ್ರೋಶ ವ್ಯಕ್ತಪಡಿಸಿ, “ನಾವು ಖರ್ಚು ಮಾಡಿದ ಹಣದ ಅರ್ಧವೂ ವಾಪಸ್ ಬರುವ ಪರಿಸ್ಥಿತಿ ಇಲ್ಲ,” ಎಂದು ಗೋಳಾಡಿದ್ದಾರೆ.
ಕಳೆದ ವರ್ಷ ಈರುಳ್ಳಿಗೆ ಬಂಪರ್ ಬೆಲೆ ಸಿಕ್ಕಿತ್ತು. ಅದೇ ನಿರೀಕ್ಷೆಯಲ್ಲಿ ಈ ವರ್ಷ ರೈತರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದರು. ಆದರೆ, ದೇಶಾದ್ಯಂತ ಈರುಳ್ಳಿ ಉತ್ಪಾದನೆ ಹೆಚ್ಚಾದ ಪರಿಣಾಮ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದೆ.
ಒಂದು ಎಕರೆ ಈರುಳ್ಳಿ ಬೆಳೆಯಲು 50ರಿಂದ 60 ಸಾವಿರ ರೂಪಾಯಿ ವ್ಯಯವಾಗುತ್ತದೆ. ಬೀಜ, ರಾಸಾಯನಿಕ, ನೀರಾವರಿ, ಕೂಲಿ ಸೇರಿ ರೈತರ ಮೇಲೆ ಸಾಲದ ಹೊರೆ ಹೆಚ್ಚಾಗಿದೆ. ಆದರೆ, ಮಾರಾಟದ ಸಮಯದಲ್ಲಿ ಈರುಳ್ಳಿ ಬೆಲೆ ಕೇವಲ ₹200–₹600 ಸಿಗುತ್ತಿರುವುದು ಅನ್ನದಾತರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ.
ಹರ್ಲಾಪುರ ಗ್ರಾಮದ ಶಂಕ್ರಣ್ಣ ಎನ್ನುವ ರೈತ ಈ ಪರಿಸ್ಥಿತಿಯ ಜೀವಂತ ಉದಾಹರಣೆ. ಸಾಲ ಸೂಲ ಮಾಡಿ ಈರುಳ್ಳಿ ಬೆಳೆದಿದ್ದ ಶಂಕ್ರಣ್ಣ, “ಈರುಳ್ಳಿ ಮಾರಾಟ ಮಾಡಿ ಮಗನ ಮದುವೆ ಮಾಡಿಸಬೇಕು, ಮನೆ ಕಟ್ಟಿಸಬೇಕು ಅನ್ನೋ ಕನಸು ಕಂಡಿದ್ದೆ. ಆದರೆ ಬೆಲೆ ಕೇಳಿ ಕಣ್ಣೀರು ಬಂತು. ಸಾಲಗಾರರಿಗೆ ಹಣ ಕೊಡೋ ಪರಿಸ್ಥಿತಿ ಇಲ್ಲ,” ಎಂದು ಕಣ್ಣೀರು ಹಾಕುತ್ತಾನೆ. “ಊರಿಗೆ ಹೋದರೆ ಸಾಲಗಾರ ಕಾಟ ಬೇರೆ. ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದ್ರೇ ಮಾತ್ರ ಬದುಕು ಉಳಿಯುತ್ತೆ,” ಎಂದು ಬೇಸರ ವ್ಯಕ್ತಪಡಿಸಿದ್ದಾನೆ.
ಇದು ಕೇವಲ ಶಂಕ್ರಣ್ಣನ ಕಥೆ ಅಲ್ಲ ಗದಗ, ನರಗುಂದ, ರೋಣ, ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ರೈತರೂ ಇದೇ ದುಸ್ಥಿತಿಯಲ್ಲಿ ಸಿಲುಕಿದ್ದಾರೆ.
ಸ್ಥಳೀಯ ರೈತ ಸಂಘಟನೆಗಳು ಕೂಡಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಆಳುವ ಸರ್ಕಾರಗಳು ಈರುಳ್ಳಿಗೆ ತಕ್ಷಣ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ರೈತರು ಬೀದಿ ಬಂದು ಪ್ರತಿಭಟನೆ ನಡೆಸಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.
“ಸರ್ಕಾರ ನಮ್ಮ ನೋವು ನೋಡಿ, ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP