ಗದಗ, 21 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಾಮೂಹಿಕ ವಿವಾಹಗಳಲ್ಲಿ ನಡೆಯುವ ಬಾಲ್ಯವಿವಾಹ ತಡೆಗಟ್ಟಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ .ಕೆ. ಪಾಟೀಲ ಹೇಳಿದರು.
ಗದಗ ಗಾಂಧಿ ನಗರ(ಸೆಟ್ಲಮೆಂಟ್) ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಬಾಲ ನ್ಯಾಯ ಮಂಡಳಿ ಮತ್ತು ಮಕ್ಕಳ ಕಲ್ಯಾಣ ಸಮಿತಿ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಾಮೂಹಿಕ ವಿವಾಹಗಳು ನಡೆಯುವ ಕಡೆ ಒಂದು ದಿನ ಮುಂಚಿತವಾಗಿಯೇ ಹೋಗಬೇಕು. ಪೊಲೀಸರ ನೆರವು ಪಡೆದು ವಿಡಿಯೋ ಚಿತ್ರೀಕರಣದ ಮೂಲಕ ಪರಿಶೀಲನೆ ನಡೆಸಿ, ಬಾಲ್ಯವಿವಾಹ ನಡೆಯದಂತೆ ನೋಡಿಕೊಳ್ಳಬೇಕು ಎಂದರು.
ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ ನಡೆಸುವ ಸಂಘ ಸಂಸ್ಥೆಗಳು, ಆಯೋಜಕರು ಕಡ್ಡಾಯವಾಗಿ ಮಕ್ಕಳ ರಕ್ಷಣಾ ಘಟಕದಿಂದ ನಿರಪೇಕ್ಷಣಾ ಪತ್ರ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಮಾರ್ಗಸೂಚಿಯನ್ನು ಪ್ರಕಟಿಸಲಿದ್ದು, ಅಧಿಕಾರಿಗಳು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಮಕ್ಕಳ ಸಹಾಯವಾಣಿ 1098ಗೆ ಯಾವ ಸಂದರ್ಭದಲ್ಲಿ ಮತ್ತು ಯಾವ ಉದ್ದೇಶಕ್ಕೆ ಕರೆ ಮಾಡಬೇಕು. ಬಾಲ ನ್ಯಾಯ ಮಂಡಳಿಯ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಜಾಗೃತಿ ಕೈಗೊಳ್ಳಬೇಕು ಎಂದ ಸಚಿವರು, ಬಾಲ ನ್ಯಾಯ ಮಂಡಳಿ ಆವರಣದಲ್ಲಿ ವಿಶಾಲವಾದ ಜಾಗವಿದ್ದು, ತೋಟಗಾರಿಕೆ ಇಲಾಖೆ ನೆರವಿನಿಂದ ಉದ್ಯಾನ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾತನಾಡಿ, ಅಪರಾಧ ಚಟುವಟಿಕೆಯಲ್ಲಿ ತೊಡಗಿದ 18 ವರ್ಷದೊಳಗಿನ ಮಕ್ಕಳನ್ನು ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಿ, ಅವರಿಗೆ ಸೂಕ್ತ ತಿಳಿವಳಿಕೆ ನೀಡುವ ಕೆಲಸವನ್ನು ಬಾಲ ನ್ಯಾಯ ಮಂಡಳಿ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀಧರ ಸಿ.ಎನ್., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಸುರೇಶ ಕಟ್ಟಿಮನಿ, ಪ್ರಭು ಬುರಬುರೆ, ಎಸ್.ಎನ್. ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP