ಗದಗ, 21 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ರಸ್ತೆ ಹದಗೆಟ್ಟಿರುವ ಸಮಸ್ಯೆ ಈಗ ಜೀವ ಹಾನಿ ಉಂಟುಮಾಡುವ ಮಟ್ಟಕ್ಕೆ ತಲುಪಿದೆ. ಮಾಗಡಿ ಗ್ರಾಮದ ಸಮೀಪ ನಡೆದ ಅಪಘಾತ ಇದಕ್ಕೆ ಸಾಕ್ಷಿಯಾಗಿದೆ. ಹತ್ತಿ ತುಂಬಿಕೊಂಡು ಹೊರಟಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿ ಭೀಕರ ಘಟನೆ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಗದಗದಿಂದ ಹಾವೇರಿ ಜಿಲ್ಲೆಯ ಸವಣೂರ ಕಡೆಗೆ ಹತ್ತಿ ತುಂಬಿಕೊಂಡು ತೆರಳುತ್ತಿದ್ದ ಲಾರಿ ಮಾಗಡಿ ಸಮೀಪ ಎದುರು ಬರುತ್ತಿದ್ದ ಬೈಕ್ ತಪ್ಪಿಸಲು ಹೋಗಿ ಅಕಸ್ಮಿಕವಾಗಿ ಪಲ್ಟಿಯಾಗಿದೆ. ಇದೇ ವೇಳೆ ರಸ್ತೆ ಪಕ್ಕ ಬೈಕ್ ನಿಲ್ಲಿಸಿ ಜಮೀನಿಗೆ ತೆರಳಿದ್ದ ರೈತರ ಬೈಕ್ ಲಾರಿ ಅಡಿ ಸಿಲುಕಿ ನುಜ್ಜುನುಜ್ಜಾಗಿದೆ. ಅದೃಷ್ಟವಶಾತ್ ಸವಾರರು ಕೆಲವು ನಿಮಿಷಗಳ ಮುಂಚೆಯೇ ಜಮೀನಿಗೆ ತೆರಳಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದಲ್ಲಿ ಲಾರಿಗೆ ಭಾರೀ ಹಾನಿ ಸಂಭವಿಸಿದ್ದು, ರಸ್ತೆ ಸಂಚಾರವೂ ಕೆಲವು ಹೊತ್ತಿನವರೆಗೆ ಸ್ಥಗಿತಗೊಂಡಿತ್ತು. ಶಿರಹಟ್ಟಿ ಪೊಲೀಸ್ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ.
ಸ್ಥಳೀಯರು ಹಾಗೂ ರೈತರು ರಸ್ತೆ ಹದಗೆಟ್ಟಿರುವುದೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ–ಲಕ್ಷ್ಮೇಶ್ವರ ರಸ್ತೆ ಹಲವು ತಿಂಗಳಿನಿಂದ ಗುಂಡಿಗಳ ಕಾಟದಲ್ಲಿ ಸಿಲುಕಿದ್ದು, ವಾಹನ ಸವಾರರಿಗೆ ಪ್ರತಿದಿನದ ತಲೆನೋವಾಗಿಯೇ ಪರಿಣಮಿಸಿದೆ. “ರಸ್ತೆ ಎಲ್ಲಿ ಮುಗಿದು, ಗುಂಡಿ ಎಲ್ಲಿ ಶುರುವಾಗುತ್ತೆ ಅಂತ ಗೊತ್ತಾಗೋದೇ ಇಲ್ಲ. ಯಾವಾಗಲೂ ಅಪಘಾತ ಭೀತಿ,” ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಳೆಯ ಹಂಗಾಮಿನಲ್ಲಿ ರಸ್ತೆಯು ಇನ್ನಷ್ಟು ಹಾಳಾಗಿರುವುದರಿಂದ ವಾಹನ ಸವಾರರು ಹಗಲು ರಾತ್ರಿ ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ತಿಂಗಳು ಇದೇ ಮಾರ್ಗದಲ್ಲಿ ಒಂದು ಖಾಸಗಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಸರಿದು ಪ್ರಯಾಣಿಕರು ಬಚಾವಾಗಿದ್ದ ಘಟನೆ ಇನ್ನೂ ಜನ ಮನಸ್ಸಿನಲ್ಲಿ ಹಸಿಯಾಗಿಯೇ ಇದೆ.
“ಪ್ರತಿವರ್ಷ ರಸ್ತೆ ದುರಸ್ತಿ ಕೆಲಸಕ್ಕೆ ಕೋಟಿ ಕೋಟಿ ರೂಪಾಯಿ ಮೀಸಲಾಗ್ತದೆ, ಆದರೆ ಗುಣಮಟ್ಟ ಶೂನ್ಯ. ಜನ ಕಷ್ಟ ಪಡ್ತಾರೆ, ಅಧಿಕಾರಿಗಳು ಕಿವಿಗೊಡ್ತಿಲ್ಲ,” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಪಘಾತದ ಹಿನ್ನೆಲೆ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಸರ್ಕಾರ ಮತ್ತು ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ರಸ್ತೆ ತಪಾಸಣೆ ನಡೆಸಿ ತಕ್ಷಣ ದುರಸ್ತಿ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP