ಗದಗ, 21 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬೆಳಕಿನ ಹಬ್ಬ ದೀಪಾವಳಿ ಸಡಗರ ಜೋರಾಗಿದೆ. ಆದರೆ ಈ ಹಬ್ಬ ರೈತರ ಬದುಕಿಗೆ ಬೆಳಕು ತರಬೇಕಾದರೆ, ಕತ್ತಲು ತರಿಸಿದಂತಾಗಿದೆ. ಹೌದು ಗದಗ ಜಿಲ್ಲೆಯ ಹೂ ಬೆಳೆಗಾರರು ಈ ಬಾರಿ ದೀಪಾವಳಿಯಲ್ಲೂ ನಿರಾಶರಾಗಿದ್ದಾರೆ.
ದೀಪಾವಳಿಗೆ ಭರ್ಜರಿ ರೇಟ್ ಸಿಗುತ್ತೆ ಅಂತ ಹಗಲು-ರಾತ್ರಿ ಹೂ ಕಟಾವು ಮಾಡಿ ಮಾರ್ಕೆಟ್‌ಗೆ ತಂದಿದ್ದರು ರೈತರು, ಮಾರ್ಕೆಟ್‌ನಲ್ಲಿ ದರ ಕೇಳಿ ಕಂಗಾಲಾಗಿದ್ದಾರೆ. ಹಿಂದೆ ದೀಪಾವಳಿಯ ವೇಳೆ ಸೇವಂತಿ ಹೂವು ಕೆ.ಜಿಗೆ ₹300–₹400 ಹಾಗೂ ಚೆಂಡು ಹೂವು ₹150–₹200 ಸಿಗುತ್ತಿದ್ದರೆ, ಈ ಬಾರಿ ಸೇವಂತಿ ₹100–₹150, ಚೆಂಡು ಹೂವು ₹50–₹80ಗೆ ಕುಸಿದಿದೆ.
ಹೊರರಾಜ್ಯಗಳಿಂದ ಅಪಾರ ಪ್ರಮಾಣದ ಹೂವು ಆವಕ ಆಗಿರುವುದು ದರ ಕುಸಿತಕ್ಕೆ ಕಾರಣ ಎನ್ನಲಾಗಿದೆ. ದಲ್ಲಾಳಿಗಳು ಹೂವನ್ನೇ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡ್ತಿರೋದಲ್ಲದೆ, ರೈತರಿಗೆ ಕವಡೆಕಾಸು ಮಾತ್ರ ಸಿಗ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಎಕರೆ ಹೂ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತರಿಗೆ ಈಗ ನಷ್ಟದ ಲೆಕ್ಕ ಮಾತ್ರ ಉಳಿದಿದೆ. “ದೀಪಾವಳಿಗಾದ್ರೂ ಬೆಳಕಾಗುತ್ತೆ ಅಂದುಕೊಂಡಿದ್ದೇವೆ, ಆದರೆ ಕತ್ತಲೇ ಬಂತು,” ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಗದಗ ಎಪಿಎಂಸಿ ಹೂ ಮಾರ್ಕೆಟ್‌ನಲ್ಲಿ ಈ ಬಾರಿ ದೀಪಾವಳಿ ಹಬ್ಬಕ್ಕೂ ಹೂ ಬೆಲೆ ಕುಸಿತ ಕಂಡಿದ್ದು, ರೈತರ ಹಣೆಬರಹವೇ ಸರಿಯಿಲ್ಲವೆನ್ನುವಂತಾಗಿದೆ. “ಸರ್ಕಾರ ರೈತರ ನೋವನ್ನು ಅರ್ಥಮಾಡಿಕೊಂಡು ಪರಿಹಾರ ನೀಡಬೇಕು,” ಎಂದು ರೈತರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP