ಬೆಂಗಳೂರು, 21 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಿಜೆಪಿ ನಾಯಕರ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ಚಿಕ್ಕಪೇಟೆಯ ಆಧುನೀಕರಣ ಮತ್ತು ಗಾಂಧಿನಗರ ಕ್ಷೇತ್ರದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜಿಎಸ್‌ಟಿ ಜಾರಿ ಮಾಡಿ 8 ವರ್ಷ ಇಡೀ ಭಾರತೀಯರ ಹಣ ಸುಲಿದಿದ್ದು ಇದೇ ಕೇಂದ್ರ ಸರ್ಕಾರ ಮತ್ತು ಇದೇ ನರೇಂದ್ರ ಮೋದಿ. ಎಂಟು ವರ್ಷ ಸುಲಿಗೆ ಮಾಡಿ ಈಗ ಮೋದಿ ಫೋಟೋ ಹಾಕಿ ದೀಪಾವಳಿ ಗಿಫ್ಟ್ ಎಂದು ನಾಚಿಕೆ ಇಲ್ಲದೆ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ಎಂದರು.
ಸಂಸದ ತೇಜಸ್ವಿ ಸೂರ್ಯ ವಿರುದ್ದ ಹರಿಹಾಯ್ದ ಅವರು ಇವರನ್ನು ಅಮವಾಸೆ ಸೂರ್ಯ ಅಂತ ಕರಿತೀನಿ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ದ್ರೋಹದ ಬಗ್ಗೆ ಅಮವಾಸೆ ಸೂರ್ಯ ಇವತ್ತಿನವರೆಗೆ ಬಾಯಿ ಬಿಟ್ಟಿಲ್ಲ, ಸಚಿವರಾದ ಶೋಭಾ ಕರಂದ್ಲಾಜೆ, ಹೆಚ್.ಡಿ.ಕುಮಾರಸ್ವಾಮಿ ಅವರು ಮೋದಿ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಮೋಸ, ದ್ರೋಹದ ಬಗ್ಗೆ ಒಂದೇ ಒಂದು ದಿನ ಬಾಯಿ ಬಿಟ್ಟಿದ್ದಾರಾ ? ಇಂಥವರನ್ನು ಗೆಲ್ಲಿಸಿ ನಿಮಗಾಗಲೀ, ರಾಜ್ಯಕ್ಕಾಗಲೀ, ಅವರು ಗೆದ್ದ ಕ್ಷೇತ್ರಕ್ಕಾಗಲೀ ಏನು ಸಿಕ್ಕಿದೆ ಎಂದು ಪ್ರಶ್ನಿಸಿದರು.
ಆರ್.ಅಶೋಕ್, ವಿಜಯೇಂದ್ರ ಸೇರಿ ಯಾರದ್ದೂ ಸ್ವಂತ ಮಾತು ಇಲ್ಲ. ಆರ್‌ಎಸ್‌ಎಸ್ ನವರು ಬರೆದುಕೊಟ್ಟಿದ್ದನ್ನು ಓದಿ ಹೋಗುವುದಷ್ಟೆ ಇವರ ಕೆಲಸ, ವಿಧಾನ ಸಭಾ ಅಧಿವೇಶನ ವೇಳೆ ಒಮ್ಮೆ ಆರ್.ಅಶೋಕ್ ಗೆ ಕೇಳಿದ್ದೆ. ಆಗ ಆರ್.ಅಶೋಕ್ ಅವರು, ಏನು ಮಾಡೋದು ಸರ್. ಆರ್‌ಎಸ್‌ಎಸ್ ನವರು ಒಬ್ರು ಬಂದು ಕೂತಿರ್ತಾರೆ. ಅವರು ಹೇಳಿದ್ದನ್ನು ಹೇಳದೇ ಹೋದರೆ ನಮ್ಮನ್ನು ಬಿಡಲ್ಲ ಸಾರ್ ಎಂದು ಉತ್ತರಿಸಿದ್ದರು ಎಂದು ವ್ಯಂಗ್ಯವಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa