ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ, ವೀರ ರಾಣಿ ಕಿತ್ತೂರು ಚೆನ್ನಮ್ಮ
ಗದಗ, 20 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮಹಿಳೆ ದುರ್ಬಲಳಲ್ಲ ಅವಳಲ್ಲಿ ದೇಶವನ್ನು ಕಾಪಾಡುವ ಶಕ್ತಿಯಿದೆ.” ಈ ಮಾತು ಕಿತ್ತೂರಿನ ಧೀರ ನಾಯಕಿ ರಾಣಿ ಚೆನ್ನಮ್ಮರ ಬದುಕಿನ ಸಾರ. ಭಾರತದ ಸ್ವಾತಂತ್ರ್ಯ ಇತಿಹಾಸದ ಮೊದಲ ಪುಟದಲ್ಲೇ ಅಕ್ಷರಶಃ ಅಮರಳಾದ ಹೆಸರಿದು. ಬ್ರಿಟಿಷರ ಕ್ರೂರ ಆಳ್ವಿಕೆಗೆ ಮೊದಲ ಬಾರಿಗೆ ಸ
ಪೋಟೋ


ಗದಗ, 20 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮಹಿಳೆ ದುರ್ಬಲಳಲ್ಲ ಅವಳಲ್ಲಿ ದೇಶವನ್ನು ಕಾಪಾಡುವ ಶಕ್ತಿಯಿದೆ.” ಈ ಮಾತು ಕಿತ್ತೂರಿನ ಧೀರ ನಾಯಕಿ ರಾಣಿ ಚೆನ್ನಮ್ಮರ ಬದುಕಿನ ಸಾರ. ಭಾರತದ ಸ್ವಾತಂತ್ರ್ಯ ಇತಿಹಾಸದ ಮೊದಲ ಪುಟದಲ್ಲೇ ಅಕ್ಷರಶಃ ಅಮರಳಾದ ಹೆಸರಿದು. ಬ್ರಿಟಿಷರ ಕ್ರೂರ ಆಳ್ವಿಕೆಗೆ ಮೊದಲ ಬಾರಿಗೆ ಸವಾಲು ಹಾಕಿದ ಧೈರ್ಯವಂತೆಯಾದ ರಾಣಿ ಚೆನ್ನಮ್ಮರು, ಮಹಿಳಾ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಜೀವಂತ ಪ್ರತೀಕವಾಗಿ ಇಂದಿಗೂ ಜನಮನಗಳಲ್ಲಿ ಅಳಿಯದ ಸ್ಥಾನ ಪಡೆದಿದ್ದಾರೆ.

ಜನನ ಮತ್ತು ಬಾಲ್ಯ ಧೈರ್ಯದ ಪಥಾರಂಭ : 1778 ರಲ್ಲಿ ಬೆಳಗಾವಿ ಜಿಲ್ಲೆಯ ಕಾಕತ ಗ್ರಾಮದಲ್ಲಿ ಜನಿಸಿದ ಚೆನ್ನಮ್ಮರು ಬಾಲ್ಯದಲ್ಲೇ ಸಾಹಸ ಪ್ರಿಯೆ. ಕುದುರೆ ಸವಾರಿ, ಕತ್ತಿಯಾಟ, ಬಿಲ್ಲುಬಾಣ — ಇವು ಅವರ ದಿನನಿತ್ಯದ ಆಟಗಳು.

ದೃಢ ಮನೋಬಲ ಮತ್ತು ನ್ಯಾಯಬುದ್ಧಿಯಿಂದ ಅವರು ತೊಡಗಿದ ಪ್ರತಿ ಕಾರ್ಯದಲ್ಲೂ ಶೌರ್ಯ ಪ್ರದರ್ಶಿಸಿದರು. ಆ ಸಮಯದಲ್ಲಿ ಮಹಿಳೆಯರು ಅಂಗಳದ ಒಳಗೆ ಸೀಮಿತವಾಗಿದ್ದಾಗ, ಚೆನ್ನಮ್ಮರು ಹೊರಾಂಗಣದಲ್ಲಿ ಧೈರ್ಯ ಪ್ರದರ್ಶನದ ಮಾದರಿಯಾದರು.

ಕಿತ್ತೂರಿನ ಆಡಳಿತಗಾರ್ತಿ, ನಾಡಿನ ತಾಯಿ : ಚೆನ್ನಮ್ಮರು ಕಿತ್ತೂರಿನ ರಾಜ ಮಲ್ಲಸರ್ಜರ ಪತ್ನಿಯಾಗಿದ್ದರು. ಪತಿಯ ನಿಧನದ ಬಳಿಕ ಅವರು ರಾಜ್ಯದ ಹೊಣೆ ಹೊತ್ತು ಆಡಳಿತದಲ್ಲಿ ದೃಢತೆಯಿಂದ ನಡೆದುಕೊಂಡರು. ಸಂತಾನವಿಲ್ಲದ ಕಾರಣ ಶಿವಲಿಂಗಪ್ಪನನ್ನು ದತ್ತು ಪಡೆದರು. ಆದರೆ ಬ್ರಿಟಿಷರು ತಮ್ಮ ಎಂಬ ಅಕ್ರಮ ನೀತಿಯಡಿ ದತ್ತಕದ ಮೂಲಕ ರಾಜ್ಯದ ಹಕ್ಕು ಸಿಗುವುದಿಲ್ಲ ಎಂದು ಘೋಷಿಸಿ, ಕಿತ್ತೂರನ್ನು ವಶಪಡಿಸಿಕೊಳ್ಳಲು ಮುಂದಾದರು.

ರಾಣಿಗೆ ಇದು ಕೇವಲ ಆಡಳಿತದ ವಿಷಯವಲ್ಲ ಗೌರವ ಮತ್ತು ಸ್ವಾಭಿಮಾನದ ವಿಷಯವಾಯಿತು.

ಅವರು ಬ್ರಿಟಿಷ ಅಧಿಕಾರಿಗೆ ಬರೆದ ಪತ್ರದಲ್ಲಿ ಹೇಳಿದರು:

“ನಮ್ಮ ರಾಜ್ಯದ ಹಕ್ಕು, ಗೌರವ ಹಾಗೂ ಸ್ವಾಭಿಮಾನವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ.”ಎಂದು ಎಚ್ಚರಿಕೆ ಸಹ ನೀಡಿದರು.

ಕಿತ್ತೂರಿನ ಯುದ್ಧ – 1824ರ ಧೀರ ಹೋರಾಟ : ಬ್ರಿಟಿಷರ ವಿರುದ್ಧದ ಮೊದಲ ಮಹಿಳಾ ಕ್ರಾಂತಿಯಾಗಿ 1824ರ ಕಿತ್ತೂರು ಯುದ್ಧ ಇತಿಹಾಸದಲ್ಲಿ ಚಿರಸ್ಮರಣೀಯ. ರಾಣಿ ಚೆನ್ನಮ್ಮರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಸ್ಥಳೀಯ ಯೋಧರು ಅಪಾರ ಶೌರ್ಯ ತೋರಿದರು. ಅವರ ಸೇನಾಪತಿಗಳಾದ ಅಮತೂರು ಬಲಪ್ಪ, ಸಂಗೊಳ್ಳಿ ರಾಯಣ್ಣ, ಗುರು ಬಸಪ್ಪ ನಾಯ್ಕ, ಸಿದ್ದಪ್ಪ ನಾಯ್ಕ ಮುಂತಾದವರು ರಾಣಿಯ ಮಾತಿಗೆ ಜೀವಕೊಡಲು ಸಿದ್ಧರಾದರು.

ಯುದ್ಧದ ವೇಳೆ ಬ್ರಿಟಿಷ ಕಮಾಂಡರ್ ಥಾಕ್ಸನ್ ಹಾಗೂ ಅನೇಕರು ಕೊಲ್ಲಲ್ಪಟ್ಟರು. ಕಿತ್ತೂರಿನಲ್ಲಿ “ಚೆನ್ನಮ್ಮ ಜಯಮಂಗಳ!” ಘೋಷಣೆಗಳು ಜೆಂಕರಿಸಿದವು. ಇದು ಭಾರತೀಯ ಸ್ವಾತಂತ್ರ್ಯ ಚಳವಳಿಯ ಮೊದಲ ವಿಜಯದ ಬೆಳಕು ಎಂದೆ ಕರೆಯಲ್ಪಿಟ್ಟಿದೆ.

ಬಂಧನ ಮತ್ತು ಬಲಿದಾನ : ಈ ಸೋಲಿನಿಂದ ಕೋಪಗೊಂಡ ಬ್ರಿಟಿಷರು ಮೋಸಮಾಡಿ ಶಾಂತಿ ಒಪ್ಪಂದದ ನೆಪದಲ್ಲಿ ಕೋಟೆಗೆ ನುಗ್ಗಿದರು.

ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರನ್ನು ಬಂಧಿಸಿದರು. ರಾಣಿಯನ್ನು ಬೈಲಹೊಂಗಲ ಕಾರಾಗೃಹಕ್ಕೆ ಕಳುಹಿಸಿ ಕಠಿಣ ನಿಗಾವಳಿಯಲ್ಲಿ ಇರಿಸಿದರು.

ಬಂಧನದಲ್ಲಿದ್ದರೂ ಅವರ ಮನಸ್ಸಿನಲ್ಲಿ ದೇಶದ ಸ್ವಾತಂತ್ರ್ಯದ ಕನಸು ಆರಲಿಲ್ಲ. ಅವರು ತಮ್ಮ ಹೋರಾಟಗಾರರಿಗೆ ಪ್ರೇರಣಾ ಪತ್ರಗಳನ್ನು ಕಳುಹಿಸುತ್ತಿದ್ದರು. ಕೊನೆಗೆ 1829ರಲ್ಲಿ ಕಾರಾಗೃಹದಲ್ಲಿಯೇ ಪ್ರಾಣ ತ್ಯಾಗ ಮಾಡಿದರೂ, ಅವರ ಆತ್ಮದ ದೀಪ ಭಾರತಕ್ಕೆ ಶಾಶ್ವತವಾಗಿ ಬೆಳಗಿತು.

ಹೋರಾಟದ ಪರಿಣಾಮ ಕ್ರಾಂತಿಯ ಬೀಜ : ರಾಣಿ ಚೆನ್ನಮ್ಮರು ಹಾಕಿದ ಹೋರಾಟದ ಕಿಡಿ ಮಣ್ಣಿನಲ್ಲಿ ಆರಲಿಲ್ಲ. ಸಂಗೊಳ್ಳಿ ರಾಯಣ್ಣರು ಅವರಿಂದ ಪ್ರೇರಿತವಾಗಿ ಗೆರಿಲ್ಲಾ ಯುದ್ಧ ತಂತ್ರದಿಂದ ಬ್ರಿಟಿಷರಿಗೆ ಭಾರೀ ತೊಂದರೆ ನೀಡಿದರು. ಕರ್ನಾಟಕದಿಂದ ಝಾನ್ಸಿವರೆಗೆ, ಹಲವೆಡೆಗಳಲ್ಲಿ ಕ್ರಾಂತಿಚೇತನ ಹುಟ್ಟಿತು.

ಅವರ ಹೋರಾಟವೇ 1857ರ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾದ ಬೀಜವಾಯಿತು.

ಕಿತ್ತೂರು ಉತ್ಸವ – ಶೌರ್ಯ ಸ್ಮರಣೆಯ ಸಂಭ್ರಮ : ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ನಡೆಯುವ ಕಿತ್ತೂರು ಉತ್ಸವ ರಾಣಿ ಚೆನ್ನಮ್ಮರ ಶೌರ್ಯವನ್ನು ಸ್ಮರಿಸುವ ಸಾಂಸ್ಕೃತಿಕ ಹಬ್ಬವಾಗಿದೆ.

ಕಿತ್ತೂರಿನ ಕೋಟೆ ಪರವಶವಾಗುವಂತೆ ಸಾವಿರಾರು ಜನರ ಸಾಂಸ್ಕೃತಿಕ ಸಾಗರ ಇಂದಿಗೂ ಹರಿದು ಬರುತ್ತದೆ.

ರಾಜ್ಯಾದ್ಯಂತ ಶಾಲೆ, ಮಹಾವಿದ್ಯಾಲಯಗಳಲ್ಲಿ ಅಕ್ಟೋಬರ್ 23 ರ ದಿನವನ್ನು ರಾಣಿ ಚೆನ್ನಮ್ಮರ ಜನ್ಮ ದಿನಾಚರಣೆ ಮೂಲಕ ಸ್ಮರಿಸಲ್ಪಡುತ್ತದೆ. ಶೌರ್ಯ ಮೆರವಣಿಗೆ. ನಾಟಕ, ನೃತ್ಯ ಮತ್ತು ನಾಟಕೀಯ ಪ್ರದರ್ಶನಗಳು. ಕಿತ್ತೂರಿನ ಇತಿಹಾಸದ ಚಿತ್ರ-ಶಿಲ್ಪ ಪ್ರದರ್ಶನಗಳು. ವಿದ್ಯಾರ್ಥಿಗಳ ಪ್ರಬಂಧ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ರಾಣಿ ಚೆನ್ನಮ್ಮ ಅವರ ಕುರಿತಾಗಿ ತಿಳಿಸಿ ಕೊಡಲಾಗುತ್ತದೆ.

ಶಾಶ್ವತ ಪ್ರೇರಣೆ – ಮಹಿಳಾ ಶಕ್ತಿಯ ಸಂಕೇತ : ಕಿತ್ತೂರು ರಾಣಿ ಚೆನ್ನಮ್ಮರು ಕೇವಲ ಇತಿಹಾಸದ ಒಂದು ಅಧ್ಯಾಯವಲ್ಲ. ಅವರು ಮಹಿಳಾ ಸಬಲೀಕರಣದ ಶಾಶ್ವತ ಮಾದರಿ, ದೇಶಭಕ್ತಿಯ ಜೀವಂತ ದೀಪ.

ಅವರ ಹೆಸರಿನಲ್ಲಿ ದೇಶದಾದ್ಯಂತ ರಸ್ತೆ, ವಿಶ್ವವಿದ್ಯಾಲಯಗಳು, ಸ್ಮಾರಕಗಳು ಸ್ಥಾಪಿಸಲ್ಪಟ್ಟಿವೆ.

ಅವರ ಜೀವನ ಕಥೆ ಪ್ರತಿ ಭಾರತೀಯ ಮಹಿಳೆಗೆ ಆತ್ಮವಿಶ್ವಾಸ, ಶಕ್ತಿ ಮತ್ತು ಪ್ರೇರಣೆಯ ಬಿತ್ತನೆ ಮಾಡುತ್ತದೆ.

ಅಮರವಾದ ಕಿತ್ತೂರಿನ ಧ್ವನಿ ಕಿತ್ತೂರಿನ ಕೋಟೆಯ ಕಲ್ಲುಗಳಲ್ಲೂ ಇಂದು ರಾಣಿ ಚೆನ್ನಮ್ಮರ ಘೋಷಣೆಗಳು ಕೇಳಿಸುತ್ತಿವೆ

ಸ್ವಾತಂತ್ರ್ಯಕ್ಕಿಂತ ಮಿಗಿಲಾದ ಧರ್ಮವಿಲ್ಲ!

ಕಿತ್ತೂರಿನ ಧೀರ ರಾಣಿ ಚೆನ್ನಮ್ಮರ ಶೌರ್ಯ ಯಾವತ್ತೂ ಅಮರ. ಅವರು ನಾಟಿದ ಸ್ವಾತಂತ್ರ್ಯದ ಬೀಜವೇ ಇಂದಿನ ನಮ್ಮ ಭಾರತ.

ರಾಣಿ ಚೆನ್ನಮ್ಮರು ಶೌರ್ಯ, ತ್ಯಾಗ ಮತ್ತು ಮಹಿಳಾ ಶಕ್ತಿಯ ಅನನ್ಯ ಪ್ರೇರಣೆ. ಅವರ ಹೆಸರಿನಂತೆ ಕಿತ್ತೂರಿನ ಮಣ್ಣು ಎಂದಿಗೂ ಧೈರ್ಯ, ಸ್ವಾತಂತ್ರ್ಯ ಮತ್ತು ಗೌರವದ ಸಂಕೇತವಾಗಿ ಬೆಳಗುತ್ತದೆ.

ವಸಂತ ಬಿ. ಮಡ್ಲೂರ,

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ, ಗದಗ

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande