ಕಲಬುರಗಿ, 19 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಇಂದು ಆರ್‌ಎಸ್‌ಎಸ್ ಪಥಸಂಚಲನ ನಡೆಸುವ ಕುರಿತು ಉಂಟಾದ ವಿವಾದ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ತಾಲೂಕು ಆಡಳಿತದಿಂದ ಅನುಮತಿ ನಿರಾಕರಣೆಯಾದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಪರವಾಗಿ ಅರ್ಜಿದಾರ ಅಶೋಕ್ ಪಾಟೀಲ್ ಕಲಬುರಗಿ ಉಚ್ಚ ನ್ಯಾಯಾಲಯದಲ್ಲಿ ತುರ್ತು ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ಅ.17ರಂದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಿದರೂ ಅ.18ರಂದು ನಿರಾಕರಣೆ ಮಾಡಲಾಗಿದೆ ಎಂದು ತಿಳಿಸಿದರು. ಪೀಠವು ಪಥಸಂಚಲನಕ್ಕೆ ಅನುಮತಿ ನೀಡುವ ಪ್ರಾಧಿಕಾರ ಹಾಗೂ ಕಾನೂನು ಕ್ರಮಗಳ ಕುರಿತು ಸ್ಪಷ್ಟನೆ ಕೋರಿ ವಿಚಾರಣೆ ನಡೆಸಿತು.
ರಾಜ್ಯ ಸರಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ವಾದಿಸಿ, ಅದೇ ದಿನ ಬೇರೊಂದು ಸಂಘಟನೆಯೂ ಪಥಸಂಚಲನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ತಾಲೂಕು ಆಡಳಿತ ಯಾವುದೇ ಸಂಘಟನೆಯನ್ನು ಅನುಮತಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆರ್‌ಎಸ್‌ಎಸ್ ಪರ ವಕೀಲ ಅರುಣ್ ಶ್ಯಾಮ್ ಅವರು ಬೇರೆ ದಿನ ಅಥವಾ ಸ್ಥಳದಲ್ಲಿ ಪಥಸಂಚಲನ ನಡೆಸಲು ಅವಕಾಶ ನೀಡುವಂತೆ ವಿನಂತಿಸಿ, ರಾಜ್ಯದ 250 ಕಡೆಗಳಲ್ಲಿ ಶಾಂತಿಪೂರ್ಣ ಪಥಸಂಚಲನ ನಡೆದಿರುವುದನ್ನು ಉಲ್ಲೇಖಿಸಿದರು.
ನ್ಯಾಯಾಲಯ ಪಥಸಂಚಲನ ಮಾರ್ಗ, ದಿನಾಂಕ, ಭಾಗವಹಿಸುವವರ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರಗಳೊಂದಿಗೆ ಹೊಸ ಅರ್ಜಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿ, ಅದರ ಪ್ರತಿಯನ್ನು ತಹಶೀಲ್ದಾರ್ ಮತ್ತು ಸ್ಥಳೀಯ ಪೊಲೀಸರಿಗೆ ನೀಡಲು ಸೂಚಿಸಿತು. ಸರ್ಕಾರವು ವರದಿ ಸಲ್ಲಿಸಿದ ನಂತರ ವಿಚಾರಣೆಯನ್ನು ಮುಂದುವರಿಸಲಾಗುವುದು ಎಂದು ಪೀಠ ತಿಳಿಸಿ, ಅಕ್ಟೋಬರ್ ೨೪ಕ್ಕೆ ವಿಚಾರಣೆ ಮುಂದೂಡಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa