ಶ್ರೀನಗರ, 17 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ಮರಳಿ ತರುವ ನಿಯೋಗದ ನೇತೃತ್ವ ವಹಿಸಲು ಶುಕ್ರವಾರ ರಷ್ಯಾದ ಕಲ್ಮಿಕಿಯಾಗೆ ತೆರಳಿದ್ದಾರೆ. ಕಳೆದ ವಾರದಿಂದ ಅಲ್ಲಿ ನಡೆದಿದ್ದ ಅವಶೇಷಗಳ ವಿಶೇಷ ಪ್ರದರ್ಶನ ಇಂದು ಪೂರ್ಣಗೊಂಡಿದೆ.
ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಅವರು ಎಕ್ಸಖಾತೆಯಲ್ಲಿ ಮಾಹಿತಿ ನೀಡಿದ್ದು, “ನಾನು ರಷ್ಯಾದ ಕಲ್ಮಿಕಿಯಾಗೆ ತೆರಳುತ್ತಿದ್ದೇನೆ. ಅಲ್ಲಿ ನಡೆದ ಒಂದು ವಾರದ ಪ್ರದರ್ಶನದ ನಂತರ ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ಮರಳಿ ತರಲು ನಿಯೋಗದ ನೇತೃತ್ವ ವಹಿಸುತ್ತಿದ್ದೇನೆ. ಈ ಅಪೂರ್ವ ಮತ್ತು ಪವಿತ್ರ ಅವಕಾಶಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಓಂ ನಮೋ ಬುದ್ಧಾಯ” ಎಂದು ತಿಳಿಸಿದ್ದಾರೆ.
ಈ ಪ್ರದರ್ಶನವನ್ನು ಭಾರತದ ಸಂಸ್ಕೃತಿ ಸಚಿವಾಲಯ, ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟ, ರಾಷ್ಟ್ರೀಯ ವಸ್ತುಸಂಗ್ರಹಾಲಯ, ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಸಹಯೋಗದಿಂದ ಆಯೋಜಿಸಲಾಗಿದೆ.
ಅವಶೇಷಗಳನ್ನು ಕಲ್ಮಿಕಿಯಾದ ಎಲಿಸ್ಟಾ ನಗರದ ಪ್ರಮುಖ ಬೌದ್ಧ ಮಠವಾದ ಶಾಕ್ಯಮುನಿ ಬುದ್ಧನ ಸುವರ್ಣ ವಾಸಸ್ಥಾನ ಎಂದೂ ಕರೆಯಲಾಗುವ ಗೆಡೆನ್ ಶೆಡಪ್ ಚೋಕೋರ್ಲಿಂಗ್ ಮಠದಲ್ಲಿ ಪ್ರದರ್ಶಿಸಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa