ಹಂಪೆ, 15 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಶ್ವವಿಖ್ಯಾತ ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿ ಪಂಪಾಪತಿ, ಪಂಪಾಭಿಕೆ ಮತ್ತು ನಾಡದೇವತೆ ಭುವನೇಶ್ವರಿ ದರ್ಶನವನ್ನು ಬುಧವಾರ ಪಡೆದರು.
ಹಂಪಿಯ ವಿರೂಪಾಕ್ಷ ಗೋಪುರದ ಮುಖ್ಯದ್ವಾರದಲ್ಲಿ ದೇಗುಲದ ಆನೆ ಲಕ್ಷಿ ಮಾಲಾರ್ಪಣೆ ಮಾಡುವ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸ್ವಾಗತಿಸಲಾಯಿತು.
ದೇಗುಲದೊಳಗಡೆ ಪುರೋಹಿತರಾದ ವೇದಬ್ರಹ್ಮ ಮೋಹನ್ ಚಿಕ್ಕಭಟ್ ಜೋಷಿ ಅವರು ವಿಜಯನಗರದ ಧಾರ್ಮಿಕ ಕೇಂದ್ರಗಳ ಮಹತ್ವ, ಸಾಮ್ರಾಜ್ಯದ ಅರಸರ ಕೊಡುಗೆಗಳು ಮತ್ತು ಐತಿಹಾಸಿಕ ಸ್ಮಾರಕಗಳ ಬಗ್ಗೆ ವಿಶ್ಲೇಷಿಸಿದರು. ಸಚಿವೆ ನಿರ್ಮಲಾ ಸೀತಾರಾಮನ್ ವಿಜಯನಗರದ ಪ್ರಮುಖ ಆರಸ ಶ್ರೀಕೃಷ್ಣದೇವರಾಯರನ್ನು ಸ್ಮರಿಸಿದರು.
ವಿಜಯನಗರ ಸಾಮ್ರಾಜ್ಯದ ಆಡಳಿತ, ಕಲೆ, ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು ಇದು ವಿಶ್ವ ಪಾರಂಪರಿಕ ತಾಣವಾಗಿದೆ. ಇಲ್ಲಿನ ಸ್ಮಾರಕಗಳನ್ನು ಸಂರಕ್ಷಣೆ ಮಾಡುವ ಮೂಲಕ ಗತವೈಭವವನ್ನು ಮರುಸ್ಥಾಪಿಸೋಣ ಎಂದರು.
ಈ ವೇಳೆ ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ ಪೀಠಾಧಿಪತಿಗಳಾದ ಶ್ರೀವಿದ್ಯಾರಣ್ಯ ಭಾರತಿ ಸ್ವಾಮೀಜಿ, ಸಂಸದ ಈ.ತುಕಾರಾಮ್, ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಹೊಸಪೇಟೆ ಸಹಾಯಕ ಆಯುಕ್ತ ಪಿ.ವಿವೇಕಾನಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ.ಎಸ್.ತಳಕೇರಿ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ನಿರ್ದೇಶಕ ಹನುಮಂತಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್