ಸಿಡ್ನಿ, 10 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಸ್ಟ್ರೇಲಿಯಾ ಪ್ರವಾಸದ ಕೊನೆಯ ದಿನ ಇಂದು ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯ ಪ್ರಮುಖ ನೆಲೆ ಎಚ್ಎಂಎಎಸ್ ಕುಟ್ಟಬುಲ್ ಗೆ ಭೇಟಿ ನೀಡಿದರು.
ಸಿಡ್ನಿಯ ಪಾಟ್ಸ್ ಪಾಯಿಂಟ್ ಪ್ರದೇಶದಲ್ಲಿರುವ ಈ ನೆಲೆಯಲ್ಲಿ ಅವರು ಫ್ಲೀಟ್ ಬೇಸ್ ಈಸ್ಟ್‌ನ ಜಲಪ್ರದೇಶವನ್ನು ಪರಿಶೀಲಿಸಿದರು ಹಾಗೂ ಆಸ್ಟ್ರೇಲಿಯಾದ ನೌಕಾ ಕಾರ್ಯಾಚರಣೆಗಳು ಮತ್ತು ಕಡಲ ಸನ್ನದ್ಧತೆ ಕುರಿತು ಮಾಹಿತಿ ಪಡೆದರು.
ಸಿಂಗ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕ ಈ ಭೇಟಿಯ ಚಿತ್ರಗಳು ಮತ್ತು ವಿವರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಕ್ಯಾನ್‌ಬೆರಾದಲ್ಲಿ ಇರುವ ಆಸ್ಟ್ರೇಲಿಯನ್ ವಾರ್ ಮೆಮೊರಿಯಲ್‌ಗೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಉಭಯ ದೇಶಗಳ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಶೌರ್ಯದಿಂದ ಹೋರಾಡಿದ ಸೈನಿಕರ ತ್ಯಾಗಕ್ಕೆ ಅವರು ನಮನ ಸಲ್ಲಿಸಿದರು.
ಇದೇ ವೇಳೆ, ರಾಜಧಾನಿ ಕ್ಯಾನ್‌ಬೆರಾದಲ್ಲಿ ಸಿಂಗ್ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿಯಾದರು. ಸಭೆಯ ಬಳಿಕ ರಾಜನಾಥ್ ಸಿಂಗ್ ತಮ್ಮ ಎಕ್ಸ ಖಾತೆಯಲ್ಲಿ ಭೇಟಿ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ, ಇದೊಂದು ಅದ್ಭುತ ಭೇಟಿ ಪ್ರಧಾನಮಂತ್ರಿ ಅಲ್ಬನೀಸ್ ಅವರು ಭಾರತದೊಂದಿಗಿನ ತಮ್ಮ ಆಳವಾದ ಬಾಂಧವ್ಯವನ್ನು ಪ್ರೀತಿಯಿಂದ ಸ್ಮರಿಸಿದರು. ಭಾರತ-ಆಸ್ಟ್ರೇಲಿಯಾ ದ್ವಿಪಕ್ಷೀಯ ಸಂಬಂಧಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲವಾಗಿ ಬೆಳೆಯುತ್ತವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಈ ಭೇಟಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರಕ್ಷಣಾ ಸಹಕಾರ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತಾ ಬಲವರ್ಧನೆಗೆ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa