
ಬಳ್ಳಾರಿ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಯುವಜನರಲ್ಲಿ ಮಾದಕದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ‘ಮೈ ಭಾರತ್’ ಬಳ್ಳಾರಿ ಘಟಕದ ವತಿಯಿಂದ ಸೆಪ್ಟೆಂಬರ್ 10 ರಂದು ಜಿಲ್ಲಾಮಟ್ಟದ ‘ನಶಾ ಮುಕ್ತ ಯುವ ವಿಕಸಿತ ಭಾರತ’ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ನೇತ್ರ ಕಲಾ ಸಂಘ (ರಿ.) ಸಿರುಗುಪ್ಪ, ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕಾಲೇಜಿನ ರಾಷ್ಟಿಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳು ಸೆಪ್ಟೆಂಬರ್ 10 ರಂದು ಬೆಳಿಗ್ಗೆ 10.30 ರಿಂದ ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜರುಗಲಿವೆ.
*8 ವಿಭಾಗಗಳಲ್ಲಿ ಸ್ಪರ್ಧೆಗಳು:*
ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಒಟ್ಟು 8 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸಮೂಹ ಗೀತೆ, ಸಮೂಹ ನೃತ್ಯ, ರೀಲ್ಸ್ / ಕಿರುಚಿತ್ರ ಸ್ಪರ್ಧೆ, ಮೂಕಾಭಿನಯ, ಕವನ ವಾಚನ / ಬರೆಯುವುದು, ಭಾಷಣ ಸ್ಪರ್ಧೆ, ಘೋಷವಾಕ್ಯ ಬರಹ ಹಾಗೂ ಚಿತ್ರಕಲೆ ಸ್ಪರ್ಧೆ.
*ರಾಜ್ಯ ಹಾಗೂ ರಾಷ್ಟಮಟ್ಟಕ್ಕೆ ಆಯ್ಕೆ:*
ಈ ಸ್ಪರ್ಧೆಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟಮಟ್ಟದ 3 ಹಂತಗಳಲ್ಲಿ ನಡೆಯಲಿವೆ. ಜಿಲ್ಲಾಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ವಿಜೇತರು ಮುಂದಿನ ರಾಜ್ಯ ಹಾಗೂ ರಾಷ್ಟಮಟ್ಟದ ಸ್ಪರ್ಧೆಗಳಲ್ಲಿ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಲು ಅರ್ಹತೆ ಪಡೆಯಲಿದ್ದಾರೆ.
*ಅರ್ಹತೆ ಮತ್ತು ನಿಯಮಗಳು:*
2026ರ ಸೆಪ್ಟೆಂಬರ್ 10ಕ್ಕೆ ಅನ್ವಯವಾಗುವಂತೆ 15 ರಿಂದ 29 ವರ್ಷದೊಳಗಿನ ಯುವಕ-ಯುವತಿಯರು ಭಾಗವಹಿಸಬಹುದು. ಸ್ಪರ್ಧಾಳುಗಳು ಬಳ್ಳಾರಿ ಜಿಲ್ಲೆಯ ನಿವಾಸಿಗಳಾಗಿರಬೇಕು ಅಥವಾ ಜಿಲ್ಲೆಯ ಯಾವುದಾದರೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಆಸಕ್ತರು ಅಧಿಕೃತ ಪೋರ್ಟಲ್ mybharat.gov.in ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ವಿವರ ಮತ್ತು ಮಾಹಿತಿಗಾಗಿ ಉಪನ್ಯಾಸಕರಾದ ಆರ್.ಪಿ. ಮಂಜುನಾಥ್ (ಮೊ: 9379857775) ಅಥವಾ ಕೆ. ಬಸಪ್ಪ (ಮೊ: 8105221069) ಅವರನ್ನು ಸಂಪರ್ಕಿಸಬಹುದು ಎಂದು ಮೇರಾ ಯುವ ಭಾರತದ ಜಿಲ್ಲಾ ಯುವ ಅಧಿಕಾರಿ ರಮೇಶ್ ಮಡ್ಡೆಪ್ಪ ತೊಳಿನವರ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್