
ಕೋಲಾರ, 28 ಸೆಪ್ಟೆಂಬರ್ (ಹಿ.ಸ) :
ಕೋಲಾರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ಅವೈಜ್ಞಾನಿಕ ರಸ್ತೆ ಉಬ್ಬುಗಳು, ಗುಂಡಿಬಿದ್ದ ರಸ್ತೆಗಳು ಹಾಗೂ ಕ್ಲಾಕ್ ಟವರ್ ಸಮೀಪದ ಕಿರಿದಾದ ಸೇತುವೆಯಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ರವರಿಗೆ ರೈತ ಸಂಘ ಮತ್ತು ಇತರ ಸಾರ್ವಜನಿಕರು ಮನವಿ ಸಲ್ಲಿಸಿದರು.
ವಿಶೇಷವಾಗಿ ಟೇಕಲ್ ಮುಖ್ಯ ರಸ್ತೆ, ಕೋಲಾರ ಬಸ್ ನಿಲ್ದಾಣ ಹಾಗೂ ಉಪನೊಂದಣಾಧಿಕಾರಿಗಳ ಕಚೇರಿ ಬಳಿ ಅವೈಜ್ಞಾನಿಕವಾಗಿ ಕಟ್ಟಿರುವ ಟೇಪ್ಗಳು ಮತ್ತು ರಸ್ತೆ ಉಬ್ಬುಗಳಿಂದ ದಿನನಿತ್ಯ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಅತ್ಯಂತ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ದೂರಿನ ಗಂಭೀರತೆಯನ್ನು ಮನಗಂಡ ಅಧಿಕಾರಿಗಳು, ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ನಗರಸಭೆ ಹಾಗೂ ಸಂಚಾರ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಗುಂಡಿಗಳನ್ನು ಮುಚ್ಚಲು, ಅನಗತ್ಯ ರಸ್ತೆ ಉಬ್ಬುಗಳನ್ನು ಹಾಗೂ ಟೇಪ್ಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೆಎನ್ಎನ್ ಟೊಮೇಟೊ ಮಂಡಿ ಮಾಲೀಕ ಕೆ.ಎನ್. ಪ್ರಕಾಶ್, ರೈತ ಸಂಘದ ಉಪಾಧ್ಯಕ್ಷ ನಾರಾಯಣಗೌಡ, ಅಮರಜ್ಯೋತಿ ಶಾಲೆಯ ಅಧ್ಯಕ್ಷ ಡಿ ಮುನಿಯಪ್ಪ, ರೋಟರಿ ಸೆಂಟ್ರಲ್ ಕೋಲಾರದ ಅಧ್ಯಕ್ಷ ಶ್ರೀನಾಥ್, ರೋಟರಿ ನಂದಿನಿ ಕೋಲಾರ ಅಧ್ಯಕ್ಷ ಬಾಬು, ರೋಟರಿ ಕೋಲಾರ ಕೇಂದ್ರ ಸದಸ್ಯ ಎಚ್.ಎಂ ಮಂಜುನಾಥ್, ವಂಶಿ ಕೃಷ್ಣ ಯಾದವ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್