ಸೇವಾ ಯಾತ್ರೆಯ ಅನುಭವಗಳು ಜೀವನದ ಅಮೂಲ್ಯ ಬಂಡವಾಳ: ಮೋದಿ
ಭಾರತವನ್ನು ಪುಸ್ತಕಗಳಿಂದಲ್ಲ, ಗ್ರಾಮ-ಗ್ರಾಮಗಳಿಗೆ ತೆರಳಿ ಅರ್ಥಮಾಡಿಕೊಳ್ಳಿ
प्रधानमंत्री नरेन्द्र मोदी ने शुक्रवार को‘सेवा संकल्प अभियान’ के तहत वडनगर से वाराणसी जाने वाले दल के साथ वीडियो कॉन्फ्रेंसिंग के माध्यम से संवाद करते हुए


ನವದೆಹಲಿ, 25 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಸೇವಾ ಸಂಕಲ್ಪ ಅಭಿಯಾನದಡಿ ವಿವಿಧ ರಾಜ್ಯಗಳ ಗ್ರಾಮಗಳಿಗೆ ತೆರಳಿ ಜನರೊಂದಿಗೆ ಬೆರೆತು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಯುವಕರಿಗೆ ಈ ಯಾತ್ರೆಯ ಅನುಭವಗಳು ಜೀವನದ ಅಮೂಲ್ಯ ಬಂಡವಾಳವಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಡನಗರದಿಂದ ವಾರಾಣಸಿಗೆ ತೆರಳುತ್ತಿರುವ ಸೇವಾ ಯಾತ್ರಿಕರ ತಂಡದೊಂದಿಗೆ ಶುಕ್ರವಾರ ವಿಡಿಯೋ ಸಂವಾದ ನಡೆಸಿದ ಅವರು, ಭಾರತದ ವೈವಿಧ್ಯತೆ, ಗ್ರಾಮೀಣ ಸಂಸ್ಕೃತಿ ಹಾಗೂ ಸಮಾಜ ಸೇವೆಯ ಮನೋಭಾವವನ್ನು ಕೇವಲ ಪುಸ್ತಕಗಳ ಮೂಲಕ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಗ್ರಾಮ-ಗ್ರಾಮಗಳಿಗೆ ತೆರಳಿ ಜನರ ನಡುವೆ ಬೆರೆತು ಅನುಭವಿಸುವ ಅಗತ್ಯವಿದೆ ಎಂದು ಹೇಳಿದರು.

ಕಳೆದ 10–12 ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಮತ್ತು ಸೌಲಭ್ಯಗಳಲ್ಲಿ ದೊಡ್ಡ ಬದಲಾವಣೆಯಾಗಿದ್ದು, ನಗರ ಮತ್ತು ಗ್ರಾಮಗಳ ನಡುವಿನ ಅಂತರ ಗಣನೀಯವಾಗಿ ಕಡಿಮೆಯಾಗಿದೆ ಎಂದು ಮೋದಿ ಹೇಳಿದರು. ನಮೋ ಡ್ರೋನ್ ದೀದಿ ಮತ್ತು ಲಕ್ಷಾಧಿಪತಿ ದೀದಿ ಸೇರಿದಂತೆ ವಿವಿಧ ಉಪಕ್ರಮಗಳನ್ನು ಉಲ್ಲೇಖಿಸಿದ ಅವರು, ಗ್ರಾಮಗಳಲ್ಲಿ ಬದಲಾವಣೆ ಕಂಡುಬರುತ್ತಿದೆಯೇ ಮತ್ತು ಗ್ರಾಮಸ್ಥರೂ ಈ ಬದಲಾವಣೆಗಳ ಬಗ್ಗೆ ಮಾತನಾಡುತ್ತಿದ್ದಾರೆಯೇ ಎಂದು ಸೇವಾ ಯಾತ್ರಿಕರನ್ನು ಪ್ರಶ್ನಿಸಿದರು. ಈ ಬದಲಾವಣೆಗಳನ್ನು ನೇರವಾಗಿ ನೋಡಲು ಮತ್ತು ಜನರೊಂದಿಗೆ ಸಂವಾದ ನಡೆಸಲು ಯಾತ್ರೆ ಯುವಕರಿಗೆ ಅವಕಾಶ ನೀಡುತ್ತಿದೆ ಎಂದರು.

ಸೇವಾ ಯಾತ್ರಿಕರು ತಮ್ಮ ಸುರಕ್ಷತೆಗೂ ಆದ್ಯತೆ ನೀಡಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ಯಾತ್ರಿಕರು ಧರಿಸಿದ್ದ ಕೇಸರಿ ಪೇಟೆಯ ಕುರಿತು ಹಾಸ್ಯಮಿಶ್ರಿತವಾಗಿ ಮಾತನಾಡಿದ ಅವರು, ಬೈಕ್ ಚಲಾಯಿಸುವಾಗ ಪೇಟೆ ಧರಿಸುವುದಿಲ್ಲ, ಹೆಲ್ಮೆಟ್ ಧರಿಸುತ್ತೀರಿ ಅಲ್ಲವೇ? ಪೇಟೆಯನ್ನು ಹೆಲ್ಮೆಟ್ ಎಂದು ಭಾವಿಸಬೇಡಿ ಎಂದು ಹೇಳಿದರು.

ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಯಾತ್ರೆಯ ವೇಳೆ ಹಾದುಹೋಗುವ ಪ್ರದೇಶಗಳ ಜನರೊಂದಿಗೆ ಬೆರೆಯಬೇಕು, ಅವರ ಸಂಪರ್ಕ ಸಂಖ್ಯೆಯನ್ನು ಪಡೆದು ಸಂಪರ್ಕ ಮುಂದುವರಿಸಬೇಕು ಹಾಗೂ ಅಗತ್ಯವಿದ್ದರೆ ವಾಟ್ಸ್‌ಆ್ಯಪ್ ಗುಂಪುಗಳನ್ನು ರಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಂಡಿತ್ ದೀನದಯಾಳ ಉಪಾಧ್ಯಾಯರ ಜಯಂತಿಯ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸಿದ ಮೋದಿ, ಸಮಾಜ ಜೀವನಕ್ಕೆ ಸಂಬಂಧಿಸಿದ ಅವರ ಏಳು ಸೂತ್ರಗಳಾದ ಸೇವಾ ಭಾವ, ಸಮತೋಲನ, ಸಂಯಮ, ಸಮನ್ವಯ, ಸಕಾರಾತ್ಮಕತೆ, ಸಂವೇದನೆ ಮತ್ತು ಸಂವಾದಗಳನ್ನು ಉಲ್ಲೇಖಿಸಿದರು. ಇವೇ ಸೇವಾ ಸಂಕಲ್ಪ ಯಾತ್ರೆಯ ಆತ್ಮವಾಗಿವೆ ಎಂದು ಹೇಳಿದರು.

ಗ್ರಾಮಗಳಲ್ಲಿ ಮಕ್ಕಳಿಗೆ ಅಧ್ಯಯನ ಸಾಮಗ್ರಿ ನೀಡುವುದು, ಸಸಿ ನೆಡುವುದು, ವೃದ್ಧರ ಸೇವೆ ಮಾಡುವುದು, ಮಹಿಳೆಯರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಯುವಕರ ಕನಸುಗಳನ್ನು ಅರ್ಥಮಾಡಿಕೊಳ್ಳುವುದು ಬೇರೆ ಬೇರೆ ಕಾರ್ಯಗಳಂತೆ ಕಾಣಬಹುದು. ಆದರೆ ಇವೆಲ್ಲದರ ಹಿಂದಿರುವ ಸಾಮಾನ್ಯ ಉದ್ದೇಶ ಮಾನವೀಯತೆಯನ್ನು ಕೇಂದ್ರದಲ್ಲಿಟ್ಟುಕೊಂಡು ಸಮಾಜ ಸೇವೆ ಮಾಡುವುದು ಎಂದು ಪ್ರಧಾನಿ ಹೇಳಿದರು.

ಮಹಾತ್ಮ ಗಾಂಧೀಜಿಯವರ ಜೀವನವನ್ನು ಉಲ್ಲೇಖಿಸಿದ ಮೋದಿ, ಸ್ವಾತಂತ್ರ್ಯ ಹೋರಾಟದ ಜತೆಗೆ ಸಾಮಾಜಿಕ ಸುಧಾರಣೆಗೂ ಗಾಂಧೀಜಿ ಶ್ರಮಿಸಿದ್ದರು. ಸಮಾಜದಲ್ಲಿನ ಅನಿಷ್ಟಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದರು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನಿರಂತರ ಪ್ರಯತ್ನ ಅಗತ್ಯ ಎಂದು ಹೇಳಿದರು.

ಸಮಾಜದ ಸ್ವಚ್ಛತೆಗಾಗಿ ಕಾರ್ಯನಿರ್ವಹಿಸುವ ಸ್ವಚ್ಛತಾ ಸಿಬ್ಬಂದಿಯ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು. ಸಮಾಜಕ್ಕಾಗಿ ಸ್ವಚ್ಛತಾ ಕಾರ್ಯ ನಿರ್ವಹಿಸುವವರನ್ನು ಗೌರವಿಸಬೇಕು. ಪ್ರಯಾಗ್‌ರಾಜ್‌ನಲ್ಲಿ ಸ್ವಚ್ಛತಾ ಸಿಬ್ಬಂದಿಯ ಪಾದ ತೊಳೆದು ಗೌರವಿಸಿದ್ದ ಘಟನೆಯನ್ನು ಉಲ್ಲೇಖಿಸಿದ ಅವರು, ಅವರ ಸೇವೆಯಿಂದ ಭಾರತದ ಗೌರವ ಹೆಚ್ಚಾಗಿದೆ ಎಂದರು.

ದೀನದಯಾಳ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನವನ್ನು ಪ್ರಸ್ತಾಪಿಸಿದ ಮೋದಿ, ವ್ಯಕ್ತಿಯ ಅಭಿವೃದ್ಧಿಯನ್ನು ಸಮಾಜ ಮತ್ತು ದೇಶದಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ಎಂದರು. ಪ್ರಕೃತಿಗೆ ಹಾನಿ ಉಂಟುಮಾಡಿ ಸಮಾಜದ ಅಭಿವೃದ್ಧಿ ಸಾಧಿಸಬಾರದು. ದೇಶದ ಅಭಿವೃದ್ಧಿಯ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಸೇವೆಯ ಈ ಭಾವನೆಯೇ ಅಂತ್ಯೋದಯದ ಚಿಂತನೆಯತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಯಶಸ್ಸಿನ ಹಾದಿ ಸಣ್ಣ ಸಣ್ಣ ಪ್ರಯತ್ನಗಳಿಂದ ನಿರ್ಮಾಣವಾಗುತ್ತದೆ. ಅಂತಹ ಪ್ರಯತ್ನಗಳ ಯಶಸ್ಸಿನ ಮೂಲಕವೇ ದೊಡ್ಡ ಗುರಿಗಳನ್ನು ಸಾಧಿಸಲು ಸಾಧ್ಯ ಎಂದು ಪ್ರಧಾನಿ ಹೇಳಿದರು. ಯಾತ್ರೆಯ ಸಂದರ್ಭದಲ್ಲಿ ದೊರೆತ ಅನುಭವಗಳನ್ನು ಬರೆಯಬೇಕು ಹಾಗೂ ದಾಖಲಿಸಿಕೊಳ್ಳಬೇಕು. ಯಾತ್ರೆ ಪೂರ್ಣಗೊಂಡ ಬಳಿಕ ಈ ಅನುಭವಗಳು ಜೀವನದಲ್ಲಿ ಬಹಳ ಉಪಯುಕ್ತವಾಗಲಿವೆ ಎಂದು ತಿಳಿಸಿದರು.

ಪ್ರಸ್ತುತ ಪ್ರತಿ ತಂಡದಲ್ಲಿ ಸುಮಾರು 20 ಮಂದಿ ಇದ್ದಾರೆ. ವಡನಗರ ಮತ್ತು ಕಾಶಿ ತಲುಪಿದ ಬಳಿಕ ಎರಡೂ ಕಡೆ ಸುಮಾರು 500–500 ಮಂದಿ ಸೇರಲಿದ್ದಾರೆ. ಎಲ್ಲರೂ ಎರಡು-ಮೂರು ಗಂಟೆಗಳ ಕಾಲ ಒಟ್ಟಿಗೆ ಕುಳಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು ಎಂದು ಮೋದಿ ಸಲಹೆ ನೀಡಿದರು.

ಸೇವಾ ಸಂಕಲ್ಪ ಯಾತ್ರೆಯು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ, ದೆಹಲಿ ಮತ್ತು ಗುಜರಾತ್ ಸೇರಿದಂತೆ 10 ರಾಜ್ಯಗಳ 193 ಜಿಲ್ಲೆಗಳು, 773 ತಾಲೂಕುಗಳು ಮತ್ತು 10,159 ಗ್ರಾಮಗಳ ಮೂಲಕ ಸಾಗುತ್ತಿದೆ. ಯಾತ್ರೆಯ ಸಂದರ್ಭದಲ್ಲಿ ಸಸಿ ನೆಡುವುದು, ಸ್ವಚ್ಛತಾ ಕಾರ್ಯ, ಹಣ್ಣು ವಿತರಣೆ, ವೈದ್ಯಕೀಯ ನೆರವು, ಕಿಟ್ ವಿತರಣೆ ಹಾಗೂ ಅಂಗಾಂಗ ದಾನದ ಸಂಕಲ್ಪ ಸೇರಿದಂತೆ ಸುಮಾರು 25 ಬಗೆಯ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ಸೆಪ್ಟೆಂಬರ್ 25ರವರೆಗೆ 20 ತಂಡಗಳು ಒಟ್ಟು 13,733 ಕಿಲೋಮೀಟರ್ ದೂರ ಕ್ರಮಿಸಿದ್ದವು. ವಾರಾಣಸಿಯಿಂದ ವಡನಗರಕ್ಕೆ ತೆರಳುತ್ತಿರುವ ತಂಡಗಳು 5,961 ಕಿಲೋಮೀಟರ್ ಯಾತ್ರೆ ಪೂರ್ಣಗೊಳಿಸಿವೆ.

ಸೇವಾ ಸಂಕಲ್ಪ ಯಾತ್ರೆಯು ನದಿಯಂತೆ ಎಲ್ಲರನ್ನೂ ಸಂಪರ್ಕಿಸುವ ಯಾತ್ರೆಯಾಗಿದೆ ಎಂದು ಮೋದಿ ಹೇಳಿದರು. ನದಿ ಯಾವ ವ್ಯಕ್ತಿ ಯಾವ ಭಾಷೆ, ಕುಟುಂಬ ಅಥವಾ ಆರ್ಥಿಕ ವರ್ಗಕ್ಕೆ ಸೇರಿದವನು ಎಂದು ಕೇಳುವುದಿಲ್ಲ. ಎಲ್ಲರಿಗೂ ನವಜೀವನ ನೀಡುತ್ತದೆ. ಅದೇ ರೀತಿ ಸೇವಾ ಯಾತ್ರೆಯೂ ಜನರೊಂದಿಗೆ ಸಂಪರ್ಕ ಬೆಳೆಸುತ್ತಾ ಜನಕಲ್ಯಾಣದಿಂದ ಜಗತ್ತಿನ ಕಲ್ಯಾಣದ ಭಾವನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು.

ಸೇವಾ ಯಾತ್ರಿಕರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದರ ಜತೆಗೆ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಯಾತ್ರೆಯ ಸಂದರ್ಭದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಜನರೊಂದಿಗೆ ಬೆರೆಯಬೇಕು ಎಂದು ಪ್ರಧಾನಿ ಕರೆ ನೀಡಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande