
ಬೆಂಗಳೂರು, 21 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆಯ ಬದಲಿಗೆ ಕೃತಕ ಬುದ್ಧಿಮತ್ತೆ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿರುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಶಿಕ್ಷಕರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು.
2026–27ನೇ ಶೈಕ್ಷಣಿಕ ಸಾಲಿನಿಂದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಅಡಿಯಲ್ಲಿ ಎಐ ಅನ್ನು ವೃತ್ತಿಪರ ವಿಷಯವಾಗಿ ಪರಿಚಯಿಸಲಾಗಿದ್ದು, ರಾಜ್ಯದ 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ.
ಅನ್ವಯವಾಗುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ತೃತೀಯ ಭಾಷೆಯ ಬದಲಿಗೆ ಎಐ ಆಧಾರಿತ ಕೌಶಲ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಈ ಕ್ರಮದಿಂದ ತೃತೀಯ ಭಾಷೆಗಳಾದ ಹಿಂದಿ, ಉರ್ದು, ಸಂಸ್ಕೃತ ಸೇರಿದಂತೆ ಇತರ ಭಾಷೆಗಳ ಬೋಧನೆಗೆ ಹಿನ್ನಡೆಯಾಗಬಹುದು ಹಾಗೂ ಭಾಷಾ ಶಿಕ್ಷಕರ ಉದ್ಯೋಗ ಮತ್ತು ನಿಯೋಜನೆ ಕುರಿತು ಅನಿಶ್ಚಿತತೆ ಉಂಟಾಗಬಹುದು ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಸೇರಿದಂತೆ ಶಿಕ್ಷಕರ ಸಂಘಟನೆಗಳು ಮೂರು ಭಾಷಾ ವ್ಯವಸ್ಥೆಯನ್ನು ಮುಂದುವರಿಸುವಂತೆ ಸರ್ಕಾರವನ್ನು ಒತ್ತಾಯಿಸಿವೆ.
“ಎಐ ಶಿಕ್ಷಣದ ಅಗತ್ಯವನ್ನು ನಾವು ವಿರೋಧಿಸುವುದಿಲ್ಲ. ಆದರೆ ತೃತೀಯ ಭಾಷೆಯ ಅವಕಾಶವನ್ನು ಕಡಿತಗೊಳಿಸಿ ಎಐ ಅನ್ನು ಪರಿಚಯಿಸುವುದರಿಂದ ಭಾಷಾ ಶಿಕ್ಷಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಶಿಕ್ಷಕರು ಹೇಳಿದ್ದಾರೆ.
ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಿ ಶಿಕ್ಷಕರ ಹಿತಾಸಕ್ತಿ ಹಾಗೂ ವಿದ್ಯಾರ್ಥಿಗಳ ಭಾಷಾ ಕಲಿಕೆಗೆ ಆದ್ಯತೆ ನೀಡಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R