
ವಿಜಯಪುರ, 20 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಸುದರ್ಶನ ಕ್ರಿಯೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು, ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಲು ಸಾಧ್ಯ ಎಂದು ಆರ್ಟ್ ಆಫ್ ಲಿವಿಂಗ್ನ ಡಾ. ಬಿ.ಎಂ. ಪಾಟೀಲ್ ಗುರೂಜಿ ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕಾರ್ಯಕ್ರಮಗಳನ್ನು ಆರಂಭಿಸಿ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರ್ಣಗೊಳಿಸಿ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ, ಆರ್ಟ್ ಆಫ್ ಲಿವಿಂಗ್ ಬಳಗದ ವತಿಯಿಂದ ನಗರದ ಸಾಯಿ ಪಾರ್ಕ್ ಬಡಾವಣೆಯ ಏಳು ಮಕ್ಕಳ ತಾಯಿ ಸಮುದಾಯ ಭವನದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಳೆದ ಎರಡು ವರ್ಷಗಳಿಂದ ಸಂಸ್ಥೆಯ ಚಟುವಟಿಕೆಗಳನ್ನು ಮುನ್ನಡೆಸಿದ ಡಾ. ಬಿ.ಎಂ. ಪಾಟೀಲ್ ಗುರೂಜಿ ಅವರನ್ನು ಸತ್ಕರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಬಿ.ಎಂ. ಪಾಟೀಲ್ ಗುರೂಜಿ, ಇಂದಿನ ವೇಗದ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ, ಆತಂಕ ಹಾಗೂ ವಿವಿಧ ರೀತಿಯ ಒತ್ತಡಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯಕ್ಕೂ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಸುದರ್ಶನ ಕ್ರಿಯೆಯಂತಹ ಉಸಿರಾಟ ಆಧಾರಿತ ಅಭ್ಯಾಸಗಳನ್ನು ನಿಯಮಿತವಾಗಿ ಮಾಡುವುದರಿಂದ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಹಾಗೂ ದೈನಂದಿನ ಒತ್ತಡವನ್ನು ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು. ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ದೈಹಿಕ ಆರೋಗ್ಯದ ಜೊತೆಗೆ ಮನಸ್ಸಿನ ಏಕಾಗ್ರತೆ ಹಾಗೂ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಲು ಸಹಾಯಕವಾಗಿವೆ ಎಂದು ಹೇಳಿದರು.
ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯಕರ ಅಭ್ಯಾಸಗಳಿಗೆ ಸಮಯ ಮೀಸಲಿಡಬೇಕು. ಯೋಗ, ಧ್ಯಾನ, ಪ್ರಾಣಾಯಾಮದಂತಹ ಚಟುವಟಿಕೆಗಳನ್ನು ಜೀವನದ ಭಾಗವನ್ನಾಗಿ ಮಾಡಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದರಿಂದ ಸಂತೋಷ, ನೆಮ್ಮದಿ ಹಾಗೂ ಸಮತೋಲಿತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಡಾ. ಪಾಟೀಲ್ ಗುರೂಜಿ ಕರೆ ನೀಡಿದರು.
ಕಾರ್ಯಕ್ರಮದ ಮತ್ತೊಂದು ಪ್ರಮುಖ ಅಂಗವಾಗಿ ಬ್ರಹ್ಮಕುಮಾರಿ ರಾಜಯೋಗಿನಿ ಸುವರ್ಣ ಅಕ್ಕನವರು ನಶೆ ಮುಕ್ತ ಅಭಿಯಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಆರೋಗ್ಯಕರ ಹಾಗೂ ನಶಾಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಜವಾಬ್ದಾರಿ ವಹಿಸಬೇಕು ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಆರ್ಟ್ ಆಫ್ ಲಿವಿಂಗ್ನ ವಿಜಯಪುರ ಜಿಲ್ಲಾ ಮಟ್ಟದ ಚಟುವಟಿಕೆಗಳು ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಯೋಗ, ಧ್ಯಾನ, ಪ್ರಾಣಾಯಾಮ ಹಾಗೂ ಸುದರ್ಶನ ಕ್ರಿಯೆಯಂತಹ ಆರೋಗ್ಯಕರ ಜೀವನಶೈಲಿ ಅಭ್ಯಾಸಗಳನ್ನು ತಲುಪಿಸುವ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಡಾ. ರವೀಂದ್ರ ಬೆಳ್ಳಿ, ಗೀತಾ ದೇಸಾಯಿ, ಮಹಾದೇವಯ್ಯ ಗಚ್ಚಿನಮಠ, ಎನ್.ಡಿ. ಮಸೂತಿ, ಪ್ರಕಾಶ ಚವ್ಹಾಣ, ಚಂದ್ರಶೇಖರ ಸಿಂಧೂರ, ಯೋಗ ಶಿಕ್ಷಕಿ ಸಹನಾ ಪಾಟೀಲ್, ಬಸಲಿಂಗಮ್ಮ ಮಸೂತಿ, ಮಹಾನಂದಾ ಬಿರಾದಾರ, ಜ್ಯೋತಿ ಪಾಟೀಲ್, ಸವಿತಾ ಕಟ್ಟಿ, ಮಹಾದೇವಿ ಬಿರಾದಾರ, ಲಕ್ಷ್ಮೀಬಾಯಿ, ಜಗದೀಶ್ ಹುಲ್ಯಾಳ ಸೇರಿದಂತೆ ಆರ್ಟ್ ಆಫ್ ಲಿವಿಂಗ್ ಬಳಗದ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande