
ವಿಜಯಪುರ, 20 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಅನಗತ್ಯ ಹಾಗೂ ಧುಂಧು ವೆಚ್ಚಗಳಿಗೆ ಕಡಿವಾಣ ಹಾಕಿ, ರೈತರ ಸಾಲಮನ್ನಾ ಸೇರಿದಂತೆ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ಗಂಭೀರತೆಯನ್ನು ಸರ್ಕಾರ ಅರಿತುಕೊಳ್ಳಬೇಕು. ರಾಜ್ಯದ ಎಲ್ಲ ಸಚಿವರು, ಶಾಸಕರು ಹಾಗೂ ಕಾರ್ಯಾಂಗದ ಉನ್ನತಾಧಿಕಾರಿಗಳು ತಮ್ಮ ಸಂಬಳ ಹಾಗೂ ವಿವಿಧ ರೀತಿಯ ವೆಚ್ಚಗಳಲ್ಲಿ ಕಡಿತ ಮಾಡುವ ನಿರ್ಧಾರವನ್ನು ಪ್ರಕಟಿಸಬೇಕು. ಕನಿಷ್ಠ ಶೇ.10ರಷ್ಟು ಧುಂಧು ವೆಚ್ಚಗಳಿಗೆ ಕಡಿವಾಣ ಹಾಕಿದರೂ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಲಿದ್ದು, ಆ ಹಣವನ್ನು ರೈತರ ಸಾಲಮನ್ನಾ ಹಾಗೂ ಬರ ಪರಿಹಾರಕ್ಕೆ ಬಳಸಬಹುದಾಗಿದೆ ಎಂದು ಹೇಳಿದರು.
ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ ನಡಹಳ್ಳಿ, ಅನ್ನ ನೀಡುವ ರೈತನಿಗೆ ಅಗತ್ಯ ನೆರವು ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ರೈತರ ಬದುಕು ಉಳಿಸುವ ಕ್ರಮಗಳಿಗೂ ಸಮಾನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಆರೋಪ
ರಾಜ್ಯದಲ್ಲಿ ಬರಗಾಲದ ಮುನ್ಸೂಚನೆ ಹಾಗೂ ಪರಿಸ್ಥಿತಿಯ ಗಂಭೀರತೆ ಕುರಿತು ಹಿಂದೆಯೇ ಚರ್ಚೆಯಾಗಿದ್ದರೂ, ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ನಡಹಳ್ಳಿ ಆರೋಪಿಸಿದರು. ದುಬೈನಲ್ಲಿ 2023ರಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದ ಸಮಾವೇಶ ಹಾಗೂ ಪ್ಯಾರಿಸ್ನಲ್ಲಿ ಕಂದಾಯ ಸಚಿವರು ಭಾಗವಹಿಸಿದ್ದ ಸಮಾವೇಶಗಳಲ್ಲಿಯೂ ರಾಜ್ಯದ ಬರ ಪರಿಸ್ಥಿತಿಯ ಕುರಿತು ಚರ್ಚೆಯಾಗಿತ್ತು. ಆದರೂ ರೈತರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಕೃಷಿ ಸಂಶೋಧನೆ ಹಾಗೂ ರೈತರಿಗೆ ವೈಜ್ಞಾನಿಕ ಮಾರ್ಗದರ್ಶನ ನೀಡಬೇಕಾದ ಸಂಶೋಧನಾ ಕೇಂದ್ರಗಳು, ತಜ್ಞರು ಹಾಗೂ ಸಂಬಂಧಿಸಿದ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಳಿಕೋಟೆ, ಚಡಚಣ, ಇಂಡಿ ಬರಪೀಡಿತ ಪ್ರದೇಶಗಳೆಂದು ಘೋಷಿಸಿ
ವಿಜಯಪುರ ಜಿಲ್ಲೆಯಲ್ಲಿ ಬರ ಘೋಷಣೆ ವಿಚಾರದಲ್ಲಿ ತಾಲೂಕುಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದು ನಡಹಳ್ಳಿ ಆರೋಪಿಸಿದರು. ತಾಳಿಕೋಟೆ ತಾಲೂಕಿನಲ್ಲಿ ಶಾಶ್ವತ ನೀರಾವರಿ ಸೌಲಭ್ಯವಿಲ್ಲದ ಪ್ರದೇಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ತಿಕೋಟಾ ತಾಲೂಕಿಗೆ ಹೋಲಿಸಿದರೆ ತಾಳಿಕೋಟೆಯಲ್ಲಿ ಮಳೆಯ ಪ್ರಮಾಣವೂ ಕಡಿಮೆ ಇದೆ. ಹೀಗಿದ್ದರೂ ತಾಳಿಕೋಟೆಯನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಚಡಚಣ, ತಾಳಿಕೋಟೆ ಹಾಗೂ ಇಂಡಿ ಭಾಗಗಳಲ್ಲಿನ ರೈತರ ಸಂಕಷ್ಟವನ್ನು ಪರಿಗಣಿಸಿ ತಕ್ಷಣವೇ ಈ ಪ್ರದೇಶಗಳನ್ನು ತೀವ್ರ ಬರಗಾಲ ಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
‘ಮೈಲ್ಡ್’, ‘ಮಾಡರೇಟ್’, ‘ಸಿವಿಯರ್’ ಸೇರಿದಂತೆ ವಿವಿಧ ಪದಗಳನ್ನು ಬಳಸಿಕೊಂಡು ಬರದ ತೀವ್ರತೆಯನ್ನು ವಿಭಜಿಸುವ ಬದಲು ರೈತರ ವಾಸ್ತವ ಪರಿಸ್ಥಿತಿಯನ್ನು ಗಮನಿಸಬೇಕು. ರೈತರ ಹಿತದೃಷ್ಟಿಯಿಂದ ಅಗತ್ಯವಿರುವ ಕಡೆ ‘ತೀವ್ರ ಬರಗಾಲ’ ಎಂದು ಘೋಷಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ನಡಹಳ್ಳಿ ಹೇಳಿದರು.
ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಲು ಆಗ್ರಹ
ಮುಂಗಾರು ಹಾಗೂ ಹಿಂಗಾರು ಬೆಳೆ ಹಾನಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವರ್ಷ ರೈತನ ಕುಟುಂಬದ ಜೀವನ ನಿರ್ವಹಣೆಗೆ ನೆರವಾಗುವ ರೀತಿಯಲ್ಲಿ ಸರ್ಕಾರ ತಕ್ಷಣವೇ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.
ಸರ್ಕಾರಿ ವೆಚ್ಚಗಳಲ್ಲಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವೈಭವದ ವೆಚ್ಚಗಳನ್ನು ನಿಯಂತ್ರಿಸಿ, ಆ ಹಣವನ್ನು ಬರ ಪರಿಹಾರ ಮತ್ತು ರೈತರ ನೆರವಿಗೆ ಬಳಸಬೇಕು ಎಂದು ಹೇಳಿದರು.
ವಿಮಾ ಪರಿಹಾರದಲ್ಲಿನ ಸಮಸ್ಯೆ ನಿವಾರಿಸಬೇಕು
ಬೆಳೆ ವಿಮೆ ವಿಚಾರದಲ್ಲಿಯೂ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ನಡಹಳ್ಳಿ ಆರೋಪಿಸಿದರು. ಬೆಳೆ ವಿಮೆ ಪಡೆಯುವ ಸಂದರ್ಭದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರ ದೊರೆಯುವಲ್ಲಿ ಆಗುತ್ತಿರುವ ವಿಳಂಬವನ್ನು ನಿವಾರಿಸಬೇಕು. ವಿಮಾ ವ್ಯವಸ್ಥೆಯನ್ನು ರೈತ ಸ್ನೇಹಿಯಾಗಿಸುವ ಅಗತ್ಯವಿದೆ ಎಂದು ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ
ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ನಡಹಳ್ಳಿ ಎಚ್ಚರಿಸಿದರು. ರೈತರ ಪರವಾದ ನಿರ್ಧಾರಗಳು ಅಧಿವೇಶನದಲ್ಲಿ ಮೊಳಗಬೇಕು. ಇಲ್ಲವಾದರೆ ರೈತ ಮೋರ್ಚಾ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರು.
ಮಂಗಳವಾರ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಸಾವಿರಾರು ರೈತರ ಸಮ್ಮುಖದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಅಲ್ಲಿಯೂ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ಹೋರಾಟವನ್ನು ಇನ್ನಷ್ಟು ತೀವ್ರ ಸ್ವರೂಪದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಉಸ್ತುವಾರಿ ಸಚಿವರ ಕಾರ್ಯವೈಖರಿ ಕುರಿತು ಪ್ರಶ್ನೆ
ಜಿಲ್ಲಾ ಉಸ್ತುವಾರಿ ಸಚಿವರು ಬರಗಾಲದ ಗಂಭೀರತೆಯನ್ನು ಅರಿತುಕೊಂಡಂತೆ ಕಾಣುತ್ತಿಲ್ಲ ಎಂದು ನಡಹಳ್ಳಿ ಟೀಕಿಸಿದರು. ಉಸ್ತುವಾರಿ ಸಚಿವರೊಂದಿಗೆ ಜಿಲ್ಲೆಯ ಶಾಸಕರು ಕಾಣುತ್ತಿಲ್ಲ. ಅಧಿಕಾರಿಗಳ ಸಭೆಗಳನ್ನು ನಡೆಸಿ ಬರ ಪರಿಸ್ಥಿತಿಯ ಪರಿಶೀಲನೆ ಮಾಡುತ್ತಿರುವುದು ಕಾಣುತ್ತಿಲ್ಲ. ಇದೇನಾ ಬರಗಾಲದ ಗಂಭೀರತೆ ಎಂದು ಪ್ರಶ್ನಿಸಿದರು.
ಅಗತ್ಯವಿರುವ ಕ್ಷೇತ್ರಗಳಿಗೆ ಮಾತ್ರ ಬರ ಘೋಷಣೆ ಮಾಡಲಾಗಿದೆ ಎಂಬ ತಮ್ಮ ಪಕ್ಷದ ಶಾಸಕರ ಆರೋಪದ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಮೇವು ಬ್ಯಾಂಕ್ ಎಲ್ಲಿದೆ?
ರೈತರ ಸಂಕಷ್ಟದ ಜೊತೆಗೆ ಜಾನುವಾರುಗಳ ಮೇವಿನ ಸಮಸ್ಯೆಯೂ ಗಂಭೀರವಾಗಿದೆ. ಜಿಲ್ಲೆಯಲ್ಲಿ ಮೇವು ಬ್ಯಾಂಕ್ಗಳನ್ನು ಸ್ಥಾಪಿಸಿರುವುದಾಗಿ ಹೇಳುವುದಾದರೆ, ಒಂದಾದರೂ ಮೇವು ಬ್ಯಾಂಕ್ ಎಲ್ಲಿದೆ ಎಂಬುದನ್ನು ತೋರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ನಡಹಳ್ಳಿ ಸವಾಲು ಹಾಕಿದರು.
ಬರಗಾಲದ ಸಂದರ್ಭದಲ್ಲಿ ಜಾನುವಾರುಗಳಿಗೆ ಅಗತ್ಯ ಮೇವು ಮತ್ತು ಕುಡಿಯುವ ನೀರು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ್ ರೆಡ್ಡಿ, ಮುಖಂಡರಾದ ಉಮೇಶ ಕಾರಜೋಳ, ಕಾಸುಗೌಡ ಬಿರಾದಾರ, ಶಿಲ್ಪಾ ಕುದರಗೊಂಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande