
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ನಗರದಲ್ಲಿ ಒತ್ತುವರಿ ತೆರವುಗೊಳಿಸಿದ ಬಳಿಕವೂ ಅದೇ ಸ್ಥಳಗಳಲ್ಲಿ ಮತ್ತೆ ವ್ಯಾಪಾರ ನಡೆಸುವ ಬೀದಿಬದಿ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.
ತೆರವುಗೊಳಿಸಿರುವ ಪಾದಚಾರಿ ಮಾರ್ಗಗಳನ್ನು ಮತ್ತೆ ಒತ್ತುವರಿ ಮಾಡದಂತೆ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಅವರು, ಮರು ಒತ್ತುವರಿ ಕಂಡುಬಂದಲ್ಲಿ ವ್ಯಾಪಾರಿಗಳ ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸುವುದರ ಜತೆಗೆ ಎಫ್ಐಆರ್ ದಾಖಲಿಸುವಂತೆ ತಿಳಿಸಿದ್ದಾರೆ.
ನಗರದ ಐದು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,373.32 ಕಿ.ಮೀ. ರಸ್ತೆಗಳಲ್ಲಿ ಒತ್ತುವರಿ ತೆರವುಗೊಳಿಸಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳ ಕಾರ್ಯವನ್ನು ಸಚಿವರು ಶ್ಲಾಘಿಸಿದ್ದಾರೆ. ಆದರೆ, ಕೆಲವೆಡೆ ತೆರವು ಕಾರ್ಯಾಚರಣೆ ಬಳಿಕವೂ ಮತ್ತೆ ಒತ್ತುವರಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿರುವುದು ಕಳವಳಕಾರಿ ಎಂದಿದ್ದಾರೆ.
ಪ್ರತಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳ ಸಮನ್ವಯದೊಂದಿಗೆ ಜಂಟಿ ಟಾಸ್ಕ್ಫೋರ್ಸ್ ರಚಿಸಿ, ತೆರವುಗೊಳಿಸಿದ ಪ್ರದೇಶಗಳಲ್ಲಿ ನಿಯಮಿತ ಹಾಗೂ ಅನಿರೀಕ್ಷಿತ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ಮರು ಒತ್ತುವರಿ ಕಂಡುಬಂದ ಕೂಡಲೇ ಸ್ಥಳದಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶಿಸಿದ್ದಾರೆ.
“ಮರು ಒತ್ತುವರಿ ಮಾಡಿದರೆ ವಸ್ತುಗಳನ್ನು ವಶಪಡಿಸಿಕೊಂಡು ದಂಡ ವಿಧಿಸುವುದರ ಜತೆಗೆ ಎಫ್ಐಆರ್ ದಾಖಲಿಸಬೇಕು. ತೆರವುಗೊಳಿಸಿದ ಫುಟ್ಪಾತ್ಗಳು ಮತ್ತೆ ಒತ್ತುವರಿಯಾಗದಂತೆ ನಿರಂತರ ನಿಗಾ ವಹಿಸಬೇಕು” ಎಂದು ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಾರ್ಷಲ್ಗಳು ಮತ್ತು ಬೀಟ್ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ನಿಯಮಿತ ಪರಿಶೀಲನೆ ನಡೆಸಬೇಕು. ಮರು ಒತ್ತುವರಿ ಪ್ರಕರಣಗಳನ್ನು ಫೋಟೊ ಹಾಗೂ ಜಿಯೋ-ಟ್ಯಾಗ್ ಮಾಹಿತಿಯೊಂದಿಗೆ ದಾಖಲಿಸಿ ವರದಿ ಮಾಡುವ ವ್ಯವಸ್ಥೆ ರೂಪಿಸುವಂತೆಯೂ ಸಚಿವರು ಸೂಚಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R