
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಪ್ರತಿದಿನ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಅವಲಂಬಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಬಿಎಂಟಿಸಿ ಬಸ್ಗಳಿಗೆ ಡೀಸೆಲ್ ಪೂರೈಸುವ ತೈಲ ಕಂಪನಿಗಳಿಗೆ ಕಳೆದ ನಾಲ್ಕೈದು ತಿಂಗಳಿಂದ ಹಣ ಪಾವತಿಯಾಗದೆ, ಸುಮಾರು ₹600 ಕೋಟಿ ಬಾಕಿ ಉಳಿದಿದೆ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ತಿಳಿಸಿದ್ದಾರೆ.
ಬಾಕಿ ಹಣವನ್ನು ತಿಂಗಳೊಳಗೆ ಪಾವತಿಸದಿದ್ದರೆ ಡೀಸೆಲ್ ಪೂರೈಕೆ ಸ್ಥಗಿತಗೊಳಿಸುವುದಾಗಿ ತೈಲ ಕಂಪನಿಗಳು ಎಚ್ಚರಿಕೆ ನೀಡಿವೆ. ಇಂಧನ ಪೂರೈಕೆ ಸ್ಥಗಿತಗೊಂಡರೆ ಬಿಎಂಟಿಸಿ ಬಸ್ಗಳು ಡಿಪೋಗಳಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಬಹುದು ಎಂದು ಜಗದೀಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಶಕ್ತಿ ಯೋಜನೆಯ ₹5 ಸಾವಿರ ಕೋಟಿ ಬಾಕಿ: ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆಯಡಿ ಸುಮಾರು ₹5 ಸಾವಿರ ಕೋಟಿ ಹಣ ಪಾವತಿಯಾಗದೆ ಬಾಕಿ ಉಳಿದಿದೆ. ಈ ಪೈಕಿ ಬಿಎಂಟಿಸಿಗೆ ಸುಮಾರು ₹1 ಸಾವಿರ ಕೋಟಿ ಬಾಕಿ ಇದೆ ಎಂದು ಅವರು ಹೇಳಿದ್ದಾರೆ.
ಬಿಎಂಟಿಸಿಯ 5,169 ಡೀಸೆಲ್ ಬಸ್ಗಳಿಗೆ ಪ್ರತಿದಿನ ಸರಾಸರಿ 2.5 ಲಕ್ಷ ಲೀಟರ್ ಡೀಸೆಲ್ ಅಗತ್ಯವಿದ್ದು, ಇದಕ್ಕಾಗಿ ದಿನಕ್ಕೆ ₹2ರಿಂದ ₹3 ಕೋಟಿ ವೆಚ್ಚವಾಗುತ್ತದೆ. ಆದರೆ ಹಲವು ತಿಂಗಳಿಂದ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ತೈಲ ಕಂಪನಿಗಳಿಗೆ ದೊಡ್ಡ ಮೊತ್ತದ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ.
ಬಿಡಿಭಾಗಗಳ ಕೊರತೆಯೂ ಕಾಡುತ್ತಿದೆ: ಇಂಧನದ ಜತೆಗೆ ಬಸ್ಗಳ ನಿರ್ವಹಣೆಗೆ ಅಗತ್ಯವಿರುವ ಬಿಡಿಭಾಗಗಳ ಕೊರತೆಯೂ ಮುಂದುವರಿದಿದೆ. ಪ್ರತಿಯೊಂದು ಡಿಪೋದಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಿದೆ ಎಂದು ಜಗದೀಶ್ ಆರೋಪಿಸಿದ್ದಾರೆ.
“ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬಿಎಂಟಿಸಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಶಕ್ತಿ ಯೋಜನೆಯ ಹಣವನ್ನು ತ್ವರಿತವಾಗಿ ಪಾವತಿಸದಿದ್ದರೆ ಸಂಸ್ಥೆಯ ಕಾರ್ಯಾಚರಣೆಗೆ ತೀವ್ರ ತೊಂದರೆಯಾಗಲಿದೆ. ಪ್ರಯಾಣಿಕರಿಗೆ ಸಮಸ್ಯೆಯಾಗುವ ಮುನ್ನ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಜಗದೀಶ್ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R