
ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಪ್ರತಿಷ್ಠಿತ 2024ನೇ ಸಾಲಿನ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಆಯ್ಕೆಯಾಗಿರುವ ಹಿರಿಯ ನಟ ಅನಂತ್ ನಾಗ್, ಈ ಗೌರವವನ್ನು ಕರ್ನಾಟಕದ ಜನತೆ ಹಾಗೂ ಕನ್ನಡಿಗರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.
ಪ್ರಶಸ್ತಿ ಲಭಿಸಿರುವುದಕ್ಕೆ ಸಂತಸ ಹಾಗೂ ಕೃತಜ್ಞತೆ ವ್ಯಕ್ತಪಡಿಸಿರುವ ಅನಂತ್ ನಾಗ್, ಕಳೆದ ಐದು ದಶಕಗಳ ಕಲಾ ಪಯಣದಲ್ಲಿ ಕರ್ನಾಟಕದ ಜನತೆ, ರಂಗಕರ್ಮಿಗಳು ಹಾಗೂ ಪತ್ರಕರ್ತರು ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ.
“ಇದುವರೆಗೆ ಕರ್ನಾಟಕದ ಜನರು ನನ್ನ ಪರವಾಗಿ ಅಭಿಯಾನ ನಡೆಸಿ, ಸಂಭ್ರಮಿಸಿದಂತೆಯೇ, ಈ ಗೌರವವೂ ಅವರಿಗೇ ಸೇರಿದೆ. ಈ ಪ್ರಶಸ್ತಿಯನ್ನು ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಅರ್ಪಿಸುತ್ತೇನೆ,” ಎಂದು ಅನಂತ್ ನಾಗ್ ಹೇಳಿದ್ದಾರೆ.
ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಿಸಿರುವುದು ಮತ್ತಷ್ಟು ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ ಪದ್ಮಭೂಷಣ ಗೌರವವೂ ಲಭಿಸಿದ್ದು, ಇದೀಗ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದು ತಮ್ಮ ಕಲಾ ಪಯಣಕ್ಕೆ ದೊರೆತ ಮಹತ್ವದ ಮನ್ನಣೆ ಎಂದು ಅನಂತ್ ನಾಗ್ ಹೇಳಿದ್ದಾರೆ.
ಐದು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ಅನಂತ್ ನಾಗ್, ನಾಯಕ, ಪೋಷಕ, ಹಾಸ್ಯ ಹಾಗೂ ಗಂಭೀರ ಪಾತ್ರಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಅವರ ಸುದೀರ್ಘ ಚಿತ್ರರಂಗದ ಸೇವೆಗೆ ಸಂದ ರಾಷ್ಟ್ರೀಯ ಗೌರವವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R