
ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ರಾಜ್ಯದಲ್ಲಿ ಪಡಿತರ ಚೀಟಿಗಳ ಇ-ಕೆವೈಸಿ ಪೂರ್ಣಗೊಳಿಸಲು ಇನ್ನೂ ಕೆಲವೇ ದಿನಗಳು ಬಾಕಿ ಇದ್ದರೂ ಈವರೆಗೆ ಕೇವಲ ಶೇ.36.44ರಷ್ಟು ಮಾತ್ರ ಕೆವೈಸಿ ಪೂರ್ಣಗೊಂಡಿದೆ. ಸರ್ವರ್ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಜನರು ಪರದಾಡುವಂತಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಇದರ ನೇರ ಹೊಡೆತ ದಿನಗೂಲಿ ಕಾರ್ಮಿಕರ ಮೇಲೆ ಬೀಳುತ್ತಿದೆ ಎಂದು ಹೇಳಿದ್ದಾರೆ. ಬೆಳಗ್ಗೆಯಿಂದಲೇ ಕೆಲಸಕ್ಕೆ ತೆರಳಬೇಕಾದ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ ಬಿಟ್ಟು ಕೆವೈಸಿ ಮಾಡಿಸಿಕೊಳ್ಳಲು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಒಂದೆಡೆ ದಿನದ ಸಂಬಳ ಇಲ್ಲ, ಮತ್ತೊಂದೆಡೆ ಕೆವೈಸಿಯೂ ಆಗುತ್ತಿಲ್ಲ. ತಾಂತ್ರಿಕ ವ್ಯವಸ್ಥೆಯನ್ನು ಸಮರ್ಪಕವಾಗಿ ಸಿದ್ಧಪಡಿಸದೆ ಗಡುವು ವಿಧಿಸಿ, ಜನರನ್ನು ಸರ್ವರ್ ಸಮಸ್ಯೆಯ ನಡುವೆ ನಿಲ್ಲಿಸಿರುವುದು ಸರ್ಕಾರದ ನಿರ್ಲಕ್ಷ್ಯದ ಪರಮಾವಧಿ ಎಂದು ಅಶೋಕ್ ಟೀಕಿಸಿದ್ದಾರೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಅರ್ಷದ್ ರಿಜ್ವಾನ್ ಅವರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಸಮಸ್ಯೆಯ ನೇರ ಹೊಡೆತ ಬಡವರು ಮತ್ತು ದಿನಗೂಲಿ ಕಾರ್ಮಿಕರ ಮೇಲೆ ಬೀಳುತ್ತಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ, ಬಡವರ ಹೊಟ್ಟೆಪಾಡಿನ ಜೊತೆ ಚೆಲ್ಲಾಟವಾಡಬೇಡಿ ಎಂದು ಅಶೋಕ್ ಆಗ್ರಹಿಸಿದ್ದಾರೆ. ಸರ್ವರ್ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ, ಕೆವೈಸಿ ಪೂರ್ಣಗೊಳಿಸಲು ಸೂಕ್ತ ವ್ಯವಸ್ಥೆ ಹಾಗೂ ಅಗತ್ಯ ಕಾಲಾವಕಾಶ ನೀಡಬೇಕು. ಸರ್ವರ್ ವೈಫಲ್ಯದಿಂದ ಯಾರೊಬ್ಬರಿಗೂ ಪಡಿತರ ಸೌಲಭ್ಯ ತಪ್ಪದಂತೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜನರ ಸಮಯವೂ ಅಮೂಲ್ಯವಾಗಿದ್ದು, ಅವರ ಒಂದು ದಿನದ ಕೂಲಿಯೂ ಜೀವನಕ್ಕೆ ಮುಖ್ಯವಾಗಿದೆ. ಹೀಗಾಗಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.