



ಬಳ್ಳಾರಿ, 15 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದ್ದು, ಯುವಕರು ಮೊಬೈಲ್ ವ್ಯಾಮೋಹದಿಂದ ಹೊರಬಂದು ಪುಸ್ತಕ ಓದುವ ಹವ್ಯಾಸ ಹಾಗೂ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಹಾಗೂ ಯುವ ಸಮುದಾಯಕ್ಕೆ ದೇಶದ ಸಂಸದೀಯ ವ್ಯವಸ್ಥೆ ಪರಿಚಯ ಮಾಡಿಕೊಡುವ ‘ಯುವ ಸಂಸತ್ತು’ ಕಾರ್ಯಕ್ರಮದ ಚಾಲನಾ ಸಮಾರಂಭ ಉದ್ಘಾಟಿಸಿ ಆವರು ಮಾತನಾಡಿದರು.
ಹಿಂದೆ ರಾಜಪ್ರಭುತ್ವದ ಕಾಲದಲ್ಲಿ ಕೇವಲ ರಾಣಿಯ ಗರ್ಭದಿಂದ ಮಾತ್ರ ರಾಜರು ಜನಿಸುತ್ತಿದ್ದರು. ಆದರೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಯ ಸಂವಿಧಾನ ರಚಿಸಿ, ಪ್ರತಿಯೊಬ್ಬ ಪ್ರಜೆಗೂ ಸಮಾನ ಮತದಾನದ ಹಕ್ಕು ನೀಡುವ ಮೂಲಕ ಅಧಿಕಾರವನ್ನು ಬ್ಯಾಲೆಟ್ ಪೆಟ್ಟಿಗೆಯಿಂದ ನಿರ್ಧರಿಸುವಂತೆ ಮಾಡಿದರು. ಇಂದು ಸಾಮಾನ್ಯ ಗ್ರಾಮ ಪಂಚಾಯತಿ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿ, ಪ್ರಧಾನಿ ಹಾಗೂ ರಾಷ್ಟçಪತಿಗಳವರೆಗೆ ಎಲ್ಲರೂ ಪ್ರಜಾಪ್ರಭುತ್ವದ ಮತಪೆಟ್ಟಿಗೆಯ ಫಲವಾಗಿದ್ದಾರೆ ಎಂದು ಸಂವಿಧಾನ ಶಿಲ್ಪಿಯ ಕೊಡುಗೆಯನ್ನು ಸ್ಮರಿಸಿದರು.
ಬಾಬಾಸಾಹೇಬರು 2 ವರ್ಷ 11 ತಿಂಗಳು 18 ದಿನಗಳ ಕಾಲ ಕಠಿಣ ಪರಿಶ್ರಮ ವಹಿಸಿ ರಚಿಸಿದ ಸಂವಿಧಾನದಿAದಾಗಿ ಇಂದು ನಮಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಸಂವಿಧಾನ ಓದುವ ಕಾರ್ಯಕ್ರಮಗಳು ಹಾಗೂ ಯುವ ಸಂಸತ್ ಮಾದರಿಯ ಚಟುವಟಿಕೆಗಳು ಹೆಚ್ಚು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಯುವಜನತೆ ಸಮಾಜಕ್ಕೆ ಹೆದರದೆ, ಬದಲಾಗಿ ಸಮಾಜವೇ ಗೌರವಿಸುವ ಮಟ್ಟಕ್ಕೆ ಜ್ಞಾನಾರ್ಜನೆ ಮಾಡಬೇಕು. ಕೇವಲ ರೀಲ್ಸ್, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡದೆ, ದೂರದೃಷ್ಟಿ, ಪ್ರಾಮಾಣಿಕತೆ, ಆತ್ಮವಿಶ್ವಾಸ, ಸಂವಹನ ಕಲೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಮಹಾನಗರ ಪಾಲಿಕೆ ಮಹಾಪೌರರಾದ ಪಿ. ಗಾದೆಪ್ಪ ಅವರು ಮಾತನಾಡಿ, ಇಂದು ನಾವೆಲ್ಲರೂ ಭಾರತದಲ್ಲಿ ಸ್ವತಂತ್ರವಾಗಿ, ನಿರಾಳವಾಗಿ ಹಾಗೂ ಸ್ವಇಚ್ಛೆಯಿಂದ ಜೀವಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ತಂಡ ರಚಿಸಿದ ಸಂವಿಧಾನವೇ ಮೂಲ ಕಾರಣ ಎಂದು ಹೇಳಿದರು.
ದೇಶದ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಾಬಾಸಾಹೇಬ್ ಅಂಬೇಡ್ಕರ್ ಅವರು ಊಟ, ನಿದ್ರೆ ಮತ್ತು ಮೂಲ ಸೌಕರ್ಯಗಳನ್ನೂ ಲೆಕ್ಕಿಸದೆ ಪಟ್ಟ ಕಷ್ಟ ಹಾಗೂ ಪರಿಶ್ರಮದ ಫಲವೇ ಇಂದಿನ ಸುಭದ್ರ ಭಾರತ ಎಂದರು. ಅವರ ತ್ಯಾಗ ಮತ್ತು ಆದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ಮಾತನಾಡಿ, ವಿಶ್ವದಲ್ಲೇ ಅತ್ಯುತ್ತಮವಾದ ಆಡಳಿತ ವ್ಯವಸ್ಥೆ ಎಂದರೆ ಅದು ಪ್ರಜಾಪ್ರಭುತ್ವ ಮಾತ್ರ. ಡಾ. ಬಿ.ಆರ್. ಅಂಬೇಡ್ಕರ್ ಅವರು ಎಲ್ಲ ಬಗೆಯ ಆಡಳಿತ ಮಾದರಿಗಳನ್ನು ಆಳವಾಗಿ ಅಧ್ಯಯನ ಮಾಡಿದ ನಂತರ, ಭಾರತಕ್ಕೆ ಪ್ರಜಾಪ್ರಭುತ್ವವೇ ಶ್ರೇಷ್ಠವೆಂದು ನಿಸ್ಸಂದೇಹವಾಗಿ ಶಿಫಾರಸು ಮಾಡಿದರು. ಸಂವಿಧಾನದ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಯಾವುದೇ ತಾರತಮ್ಯವಿಲ್ಲದೆ ‘ಒಬ್ಬ ವ್ಯಕ್ತಿ, ಒಂದು ಮತ' ಎಂಬ ಸಮಾನ ಹಕ್ಕನ್ನು ತಂದುಕೊಟ್ಟರು ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಜನರೇ ಕೇಂದ್ರಬಿ0ದು. ಸರ್ಕಾರ ಬೇರೆ, ಪ್ರಜೆಗಳು ಬೇರೆ ಅಲ್ಲ; ಸರ್ಕಾರ ನಮ್ಮದೇ ಆಗಿದೆ. ಜನಪ್ರತಿನಿಧಿಗಳು ಅಥವಾ ಆಡಳಿತ ಸರಿಯಿಲ್ಲದಿದ್ದರೆ ಅವರನ್ನು ಬದಲಾಯಿಸುವ ಸಂಪೂರ್ಣ ಅಧಿಕಾರ ಪ್ರಜೆಗಳ ಕೈಯಲ್ಲಿದೆ. ಚುನಾವಣೆ ದಿನವನ್ನು ಕೇವಲ ರಜಾದಿನವೆಂದು ಭಾವಿಸಿ ಮನೆಯಲ್ಲಿ ಉಳಿಯದೆ, ಪ್ರತಿಯೊಬ್ಬರೂ ಮತ ಚಲಾಯಿಸುವ ಮೂಲಕ ಉತ್ತಮ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸೆಪ್ಟೆಂಬರ್ 15 ಅನ್ನು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಹಾಗೂ ಸಂಸದೀಯ ಕಲಾಪಗಳ ಬಗ್ಗೆ ಅರಿವು ಮೂಡಿಸಲು ಪ್ರಪ್ರಥಮ ಬಾರಿಗೆ ‘ಯುವ ಸಂಸತ್' ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮುಂಬರುವ ನವೆಂಬರ್ 26ರ ‘ಸಂವಿಧಾನ ದಿನ'ವನ್ನು ಅರ್ಥಪೂರ್ಣವಾಗಿ ಆಚರಿಸಲು ಕೈಜೋಡಿಸಬೇಕೆಂದು ಆಶಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನ ಮಾಡುವುದಷ್ಟೇ ಅಲ್ಲ, ಅದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ಒಳಗೊಂಡಿರುತ್ತದೆ. ಅದರಲ್ಲಿಯೂ ಸಾಮಾಜಿಕ ನ್ಯಾಯವೇ ಪ್ರಜಾಪ್ರಭುತ್ವದ ನಿಜವಾದ ಜೀವಾಳವಾಗಿದೆ ಎಂದು ಹೇಳಿದರು.
ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಜೊತೆಗೆ ನಾಗರಿಕರು ತಮ್ಮ ಮೂಲಭೂತ ಕರ್ತವ್ಯಗಳನ್ನು ಮರೆಯಬಾರದು. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ದೇಶದ ಆರ್ಥಿಕತೆಗೆ ಕೊಡುಗೆ ನೀಡಬೇಕು. ದೇಶದ ಭವಿಷ್ಯ ಯುವಜನತೆಯ ಕೈಯಲ್ಲಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಸಂವಿಧಾನದ ಮೌಲ್ಯಗಳನ್ನು ಗೌರವಿಸಿ ಪಾಲಿಸಿದಾಗ ಮಾತ್ರ ಭಾರತವು ವಿಶ್ವಗುರುವಾಗಲು ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಂಪ್ಲಿಯ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ಪ್ರಾಂಶುಪಾಲ ಸಿದ್ದಣ್ಣ ಪರಮೇಶ್ವರ್ ಅವರು ಪ್ರಜಾಪ್ರಭುತ್ವದ ಆಶಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಲಾಯಿತು. ಇದಕ್ಕೂ ಮುನ್ನ ಗಣ್ಯರು ‘ಯುವ ಸಂಸತ್ತು’ ಭಿತ್ತಿಪತ್ರಗಳನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್