
ಹಾಸನ, 15 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಮೊಬೈಲ್ ಫೋನ್ ಬಳಸಿರುವ ಆರೋಪ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಪತ್ತೆಯಾದ ಅಂಶಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡು ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮಾವಿನಕೆರೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿರುವ ವ್ಯಕ್ತಿಗೆ ಈಗ ಫೋನ್ ಎಲ್ಲಿಂದ ಬಂತು, ಯಾರು ಕೊಟ್ಟರು ಎಂಬುದನ್ನು ತನಿಖೆ ಮಾಡಬೇಕಾಗಿದೆ ಎಂದು ಪ್ರಶ್ನಿಸಿದರು. ಜೈಲಿನೊಳಗೆ ಅಶ್ಲೀಲ ಚಿತ್ರಗಳು ಹೇಗೆ ಬಂದವು ಎಂಬ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದರು. ಪ್ರಕರಣದ ಬೆಳವಣಿಗೆಗಳು ಈಗಲೇ ಮುನ್ನೆಲೆಗೆ ಬರುತ್ತಿರುವ ಸಮಯದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು.
ಕೆಪಿಎಸ್ಸಿ ಹಗರಣ, ನೈಸ್ ಹಗಲು ದರೋಡೆ ಹಾಗೂ ಬಿಡದಿ ಭೂ ಹಗರಣಗಳಿಗೆ ಸಂಬಂಧಿಸಿದಂತೆ ತಾವು ಪ್ರಸ್ತಾಪಿಸಿದ ವಿಚಾರಗಳು ಬೆಳಕಿಗೆ ಬಂದ ಬಳಿಕವೇ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಹೊಸದಾಗಿ ಸರಣಿಯಂತೆ ಮುನ್ನೆಲೆಗೆ ತರಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಈ ವಿಚಾರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದ ಅವರು, ತಮ್ಮನ್ನಾಗಲಿ ಕುಟುಂಬವನ್ನಾಗಲಿ ಮೌನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಸರ್ವನಾಶ ಮಾಡುವುದನ್ನೇ ಆದ್ಯತೆಯಾಗಿ ಹೊಂದಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು. 400 ಅತ್ಯಾಚಾರ ಪ್ರಕರಣಗಳ ಬಗ್ಗೆ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಹೇಳಿದ ಅವರು, ಈ ಪ್ರಕರಣಗಳಿಂದ ಎಷ್ಟು ಕುಟುಂಬಗಳ ಹೆಣ್ಣುಮಕ್ಕಳಿಗೆ ನ್ಯಾಯ ದೊರೆತಿದೆ ಎಂದು ಪ್ರಶ್ನಿಸಿದರು.
ತಮ್ಮ ಕುಟುಂಬದ ಸದಸ್ಯರೊಬ್ಬರಿಂದ ಅನ್ಯಾಯವಾಗಿದೆ ಎಂದು ಬಿಂಬಿಸುವ ಬದಲು, ಎಷ್ಟು ಕುಟುಂಬಗಳ ಹೆಣ್ಣುಮಕ್ಕಳ ಮರ್ಯಾದೆ ಕಾಪಾಡಲಾಗಿದೆ ಎಂಬುದನ್ನು ಮುಖ್ಯಮಂತ್ರಿಗಳು ಹೇಳಬೇಕು ಎಂದು ಅವರು ಆಗ್ರಹಿಸಿದರು. ಈ ಬೆಳವಣಿಗೆಗಳಿಗೆ ಹೆದರಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
“ನಾನಾಗಲಿ ಅಥವಾ ಬೇರೆಯವರಾಗಲಿ ತಪ್ಪು ಮಾಡಿದ್ದರೆ ತಲೆಬಾಗಲು ಸಿದ್ಧನಿದ್ದೇನೆ. ಆದರೆ, ನಿಮ್ಮಂತೆ ಎಲ್ಲವನ್ನೂ ದೋಚುವ ಕೆಲಸ ಮಾಡಿಲ್ಲ” ಎಂದು ಕುಮಾರಸ್ವಾಮಿ ಹೇಳಿದರು. ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಯುತ್ತಿರುವ ತೇಜೋವಧೆಯನ್ನು ಖಂಡಿಸಿದ ಅವರು, ದೇವೇಗೌಡರು ತಮ್ಮ 75 ವರ್ಷಗಳ ರಾಜಕೀಯ ಜೀವನದಲ್ಲಿ ಅಕ್ರಮಗಳ ವಿರುದ್ಧ ಹೋರಾಡಿದ್ದಾರೆ. ಅವರ ಮಾರ್ಗದಲ್ಲೇ ತಾವು ಮುಂದುವರಿಯುವುದಾಗಿ ತಿಳಿಸಿದರು.
ರಾಜ್ಯದ ಸಂಪತ್ತನ್ನು ಉಳಿಸಲು ಹಾಗೂ ಅಕ್ರಮಗಳನ್ನು ತಡೆಯಲು ಯಾರಾದರೂ ಧ್ವನಿ ಎತ್ತಲೇಬೇಕು. ಅದಕ್ಕಾಗಿ ತಾವು ಸಿದ್ಧರಾಗಿ ನಿಂತಿರುವುದಾಗಿ ಹೇಳಿದ ಕುಮಾರಸ್ವಾಮಿ, ತಮ್ಮನ್ನು ಸುಲಭವಾಗಿ ಸ್ತಬ್ಧಗೊಳಿಸಲು ಸಾಧ್ಯವಿಲ್ಲ ಮತ್ತು ಹೋರಾಟವನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R