
ಬೆಂಗಳೂರು, 01 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಉತ್ತರ ಪ್ರದೇಶದ ಪ್ರಯಾಗ್ ರಾಜ್ ಸಬ್ದರ್ಗಂಜ್ ಜಂಕ್ಷನ್ ಮತ್ತು ಬೆಂಗಳೂರಿನ ಯಶವಂತಪುರ ಜಂಕ್ಷನ್ ನಡುವೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ವಾರದ ವಿಶೇಷ ರೈಲು ಸೇವೆ ಆರಂಭಿಸಲಾಗುತ್ತಿದೆ. ಸೆಪ್ಟೆಂಬರ್ನಿಂದ ಆರಂಭವಾಗಲಿರುವ ಈ ರೈಲು ಸೇವೆಯಿಂದ ಉತ್ತರ ಭಾರತ ಮತ್ತು ಕರ್ನಾಟಕದ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ನೈಋತ್ಯ ರೈಲ್ವೆ ಪ್ರಕಟಿಸಿರುವ ವೇಳಾಪಟ್ಟಿಯಂತೆ, ರೈಲು ಸಂಖ್ಯೆ 04135 ಸಬ್ದರ್ಗಂಜ್–ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್ ಸ್ಪೆಷಲ್ ಪ್ರತಿ ಶುಕ್ರವಾರ ಸಂಚರಿಸಲಿದೆ. ಸೆಪ್ಟೆಂಬರ್ 11ರಿಂದ ಡಿಸೆಂಬರ್ 4, 2026ರವರೆಗೆ ಈ ಸೇವೆ ಲಭ್ಯವಿರಲಿದೆ.
ಇದಕ್ಕೆ ಪ್ರತಿಯಾಗಿ ರೈಲು ಸಂಖ್ಯೆ 04136 ಯಶವಂತಪುರ–ಸಬ್ದರ್ಗಂಜ್ ವೀಕ್ಲಿ ಎಕ್ಸ್ಪ್ರೆಸ್ ಸ್ಪೆಷಲ್ ಪ್ರತಿ ಸೋಮವಾರ ಯಶವಂತಪುರದಿಂದ ಹೊರಡಲಿದೆ. ಈ ರೈಲು ಸೆಪ್ಟೆಂಬರ್ 14ರಿಂದ ಡಿಸೆಂಬರ್ 7, 2026ರವರೆಗೆ ಸಂಚರಿಸಲಿದ್ದು, ಎರಡೂ ದಿಕ್ಕಿನಲ್ಲಿ ತಲಾ 13 ಟ್ರಿಪ್ಗಳನ್ನು ನಡೆಸಲಾಗುತ್ತದೆ.
ಕರ್ನಾಟಕದಲ್ಲಿ ಪ್ರಮುಖ ನಿಲುಗಡೆ
ಯಶವಂತಪುರ ಜಂಕ್ಷನ್ ಈ ರೈಲಿನ ಆರಂಭಿಕ ಹಾಗೂ ಅಂತಿಮ ನಿಲ್ದಾಣವಾಗಿದ್ದು, ಬೆಂಗಳೂರಿನ ಯಲಹಂಕದಲ್ಲೂ ನಿಲುಗಡೆ ಇರಲಿದೆ. ಇದರ ಜೊತೆಗೆ ಹಿಂದೂಪುರ, ರಾಯಚೂರು, ಕೃಷ್ಣಾ ಮತ್ತು ಯಾದಗಿರಿ ನಿಲ್ದಾಣಗಳಲ್ಲೂ ರೈಲು ನಿಲ್ಲಲಿದೆ.
ಇದರಿಂದ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪ್ರಯಾಣಿಕರಿಗೆ ಉತ್ತರ ಭಾರತದತ್ತ ತೆರಳಲು ಹಾಗೂ ಅಲ್ಲಿಂದ ಬೆಂಗಳೂರಿಗೆ ಬರಲು ಹೆಚ್ಚುವರಿ ರೈಲು ಸಂಪರ್ಕ ದೊರೆಯಲಿದೆ.
19 ಬೋಗಿಗಳ ರೈಲು
ಈ ವಿಶೇಷ ರೈಲು ಒಟ್ಟು 19 ಬೋಗಿಗಳನ್ನು ಹೊಂದಿರಲಿದೆ. ಇದರಲ್ಲಿ 2 ಎಸಿ ತ್ರಿ-ಟೈರ್ ಕೋಚ್ಗಳು, 9 ಸ್ಲೀಪರ್ ಕೋಚ್ಗಳು, 6 ಜನರಲ್ ಸೆಕೆಂಡ್ ಕ್ಲಾಸ್ ಕೋಚ್ಗಳು ಹಾಗೂ 2 ಸೀಟಿಂಗ್-ಕಮ್-ಲಗೇಜ್ ರೇಕ್ ಕೋಚ್ಗಳು ಇರಲಿವೆ. ವಿಶೇಷ ಚೇತನ ಸ್ನೇಹಿ ವ್ಯವಸ್ಥೆಗಳನ್ನೂ ರೈಲಿನಲ್ಲಿ ಕಲ್ಪಿಸಲಾಗಿದೆ.
ವೇಳಾಪಟ್ಟಿ
ಸಬ್ದರ್ಗಂಜ್–ಯಶವಂತಪುರ (04135):
ಪ್ರತಿ ಶುಕ್ರವಾರ ರಾತ್ರಿ 9.20ಕ್ಕೆ ಸಬ್ದರ್ಗಂಜ್ನಿಂದ ಹೊರಡುವ ರೈಲು, ಭಾನುವಾರ ರಾತ್ರಿ 9.30ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರ–ಸಬ್ದರ್ಗಂಜ್ (04136):
ಪ್ರತಿ ಸೋಮವಾರ ಬೆಳಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಡುವ ರೈಲು, ಬುಧವಾರ ಮುಂಜಾನೆ 4.30ಕ್ಕೆ ಸಬ್ದರ್ಗಂಜ್ ತಲುಪಲಿದೆ.
ಇತರೆ ಪ್ರಮುಖ ನಿಲ್ದಾಣಗಳು
ಕರ್ನಾಟಕದ ನಿಲ್ದಾಣಗಳ ಹೊರತಾಗಿ ಶಂಕರಗಢ, ದಭೌರಾ, ಮಾನಿಕಪುರ, ಸತ್ನಾ, ಕಟ್ನಿ, ಜಬಲ್ಪುರ, ಇಟಾರ್ಸಿ, ಜುಜ್ಹಾರ್ಪುರ, ನಾಗಪುರ, ಬಲ್ಹಾರ್ಶಾ, ಸಿರ್ಪುರ್ ಕಾಗಜ್ನಗರ, ಬೆಲ್ಲಂಪಲ್ಲಿ, ಮಂಚೇರಿಯಲ್, ಕಾಜಿಪೇಟ್, ಸಿಕಂದರಾಬಾದ್, ಲಿಂಗಂಪಲ್ಲಿ, ವಿಕಾರಾಬಾದ್ ಮತ್ತು ತಾಂಡೂರು ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಿರಲಿದೆ.
ಪ್ರಯಾಗ್ರಾಜ್ ಹಾಗೂ ಉತ್ತರ ಭಾರತದ ವಿವಿಧ ನಗರಗಳಿಗೆ ತೆರಳುವ ಕರ್ನಾಟಕದ ಪ್ರಯಾಣಿಕರಿಗೆ ಈ ವಿಶೇಷ ರೈಲು ಸೇವೆ ಹೆಚ್ಚುವರಿ ಪ್ರಯಾಣ ಆಯ್ಕೆಯನ್ನು ಒದಗಿಸಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R