ಸೂಕ್ತ ಮಾನದಂಡಗಳ ಆಧಾರದಲ್ಲೇ 101 ತಾಲೂಕು ಬರಪೀಡಿತ ಘೋಷಣೆ:ಸಚಿವ ಟಿ. ರಘುಮೂರ್ತಿ
ಚಿತ್ರದುರ್ಗ, 28 ಆಗಸ್ಟ್ (ಹಿ.ಸ.): ಆ್ಯಂಕರ್: ರಾಜ್ಯದಲ್ಲಿ ಮಳೆ ಕೊರತೆಯ ಹಿನ್ನೆಲೆಯಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಸೂಕ್ತ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ
ಸಂಗ್ರಹ ಚಿತ್ರ


ಚಿತ್ರದುರ್ಗ, 28 ಆಗಸ್ಟ್ (ಹಿ.ಸ.):

ಆ್ಯಂಕರ್:

ರಾಜ್ಯದಲ್ಲಿ ಮಳೆ ಕೊರತೆಯ ಹಿನ್ನೆಲೆಯಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಸೂಕ್ತ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ, ಹಿರಿಯೂರು ಮತ್ತು ಹೊಸದುರ್ಗ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ ಕೆಲವು ತಾಲೂಕುಗಳು ಮಳೆ ಕೊರತೆಯಿಂದ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಕುರಿತು ರೈತರು ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

ಚಿತ್ರದುರ್ಗ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ತಾಲೂಕುಗಳನ್ನೂ ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆಗಳು ಬಂದಿವೆ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ವೈಜ್ಞಾನಿಕ ಪರಿಶೀಲನೆ ಆಧಾರ

ಬರ ಘೋಷಣೆ ಸಂದರ್ಭದಲ್ಲಿ ಸರ್ಕಾರ ನಿಗದಿತ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಬರ ನಿರ್ವಹಣೆ ಕೈಪಿಡಿ–2020ರ ಮಾರ್ಗಸೂಚಿಯಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು 2026ರ ಜೂನ್ 1ರಿಂದ ಆಗಸ್ಟ್ 12ರವರೆಗಿನ ಅವಧಿಯಲ್ಲಿ ವೈಜ್ಞಾನಿಕ ಬರ ಪರಿಶೀಲನೆ ನಡೆಸಿದೆ ಎಂದು ರಘುಮೂರ್ತಿ ತಿಳಿಸಿದ್ದಾರೆ.

ಬರ ಪರಿಸ್ಥಿತಿ ನಿರ್ಧರಿಸುವ ಪ್ರಕ್ರಿಯೆಯಲ್ಲಿ ಮೂರು ಹಂತಗಳಲ್ಲಿ ಅಧ್ಯಯನ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಕಡ್ಡಾಯ ಸೂಚಕಗಳ ಮೌಲ್ಯಮಾಪನ ಮಾಡಲಾಗುತ್ತದೆ. ಇದರಲ್ಲಿ ಮಳೆಯ ಪ್ರಮಾಣದಲ್ಲಿನ ವ್ಯತ್ಯಾಸ ಮತ್ತು ಶುಷ್ಕ ಅವಧಿಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

ಎರಡನೇ ಹಂತದಲ್ಲಿ ಪರಿಣಾಮ ಸೂಚಕಗಳ ಮೌಲ್ಯಮಾಪನ ನಡೆಯುತ್ತದೆ. ಬಿತ್ತನೆಯಾದ ಬೆಳೆಗಳ ಸ್ಥಿತಿ, ಉಪಗ್ರಹ ಆಧಾರಿತ ಸಸ್ಯವರ್ಗ ಸೂಚ್ಯಂಕ, ಮಣ್ಣಿನ ತೇವಾಂಶ, ಜಲವಿಜ್ಞಾನ ಹಾಗೂ ಅಂತರ್ಜಲ ಮಟ್ಟ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲಾಗುತ್ತದೆ. ಈ ಸೂಚಕಗಳ ಆಧಾರದ ಮೇಲೆ ಅರ್ಹ ತಾಲೂಕುಗಳನ್ನು ಮಧ್ಯಮ ಅಥವಾ ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

ಅಂತಿಮ ಹಂತದಲ್ಲಿ ಸ್ಥಳ ಪರಿಶೀಲನೆ

ಮಧ್ಯಮ ಅಥವಾ ತೀವ್ರ ಬರಪೀಡಿತ ಎಂದು ಗುರುತಿಸಲ್ಪಟ್ಟ ತಾಲೂಕುಗಳನ್ನು ಮೂರನೇ ಹಂತದಲ್ಲಿ ಸ್ಥಳ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಮ ಹಾಗೂ ತಳಮಟ್ಟದಲ್ಲಿ ಬರದಿಂದ ಉಂಟಾಗಿರುವ ಪರಿಣಾಮವನ್ನು ಪರಿಶೀಲಿಸಲಾಗುತ್ತದೆ. ಈ ಪರಿಶೀಲನೆಯು ಬರದ ತೀವ್ರತೆಯನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಡೆಸಿದ ಸಮಗ್ರ ಬರ ಮೌಲ್ಯಮಾಪನದ ಆಧಾರದ ಮೇಲೆ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇ-ಆಡಳಿತ ಇಲಾಖೆಯ ಬೆಳೆ ನಷ್ಟ ಸ್ಥಳ ಪರಿಶೀಲನೆ ಮೊಬೈಲ್ ಆ್ಯಪ್ ಮೂಲಕವೂ ಪರಿಶೀಲನೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಹೆಚ್ಚುವರಿ ತಾಲೂಕು ಸೇರ್ಪಡೆ

ಸೆಪ್ಟೆಂಬರ್‌ನಲ್ಲಿ ನಿರೀಕ್ಷಿಸಲಾಗಿರುವ ಮಳೆಯ ಮುನ್ಸೂಚನೆ ಹಾಗೂ ಕೃಷಿ ಬೆಳೆಗಳ ಮೇಲಿನ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು 2026ರ ಮುಂಗಾರು ಹಂಗಾಮಿನ ಅಂತ್ಯದವರೆಗೆ ಬರ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದು ರಘುಮೂರ್ತಿ ತಿಳಿಸಿದ್ದಾರೆ.

ನಿಯಮಾನುಸಾರ ಪರಿಶೀಲನೆ ಹಾಗೂ ಸ್ಥಳ ಪರಿಶೀಲನೆಯ ಬಳಿಕ ಅಗತ್ಯವಿದ್ದಲ್ಲಿ ಹೆಚ್ಚುವರಿ ತಾಲೂಕುಗಳನ್ನು ಹಂತ ಹಂತವಾಗಿ ಬರಪೀಡಿತ ಎಂದು ಘೋಷಿಸಲು ಅವಕಾಶವಿದೆ. ಹೀಗಾಗಿ ಪ್ರಸ್ತುತ ಪಟ್ಟಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ತಾಲೂಕುಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande