
ಬಳ್ಳಾರಿ, 28 ಆಗಸ್ಟ್ (ಹಿ.ಸ.)
ಆ್ಯಂಕರ್ : ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 5 ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ 2026-27ನೇ ಸಾಲಿನ ‘ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ’ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ.
*ಪ್ರಶಸ್ತಿಯ ವಿವರ ಹಾಗೂ ಮೊತ್ತ:*
ನಾವೀನ್ಯತೆ, ತಾರ್ಕಿಕ ಸಾಧನೆಗಳು (ಉದಾ: ಸತತ ಎರಡು ವರ್ಷ ಗಣಿತದಲ್ಲಿ ಪ್ರಥಮ ಸ್ಥಾನ), ಕ್ರೀಡೆ, ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಮಕ್ಕಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ಗೌರವವು ರೂ.10,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
*ಅರ್ಜಿ ಸಲ್ಲಿಸಲು ಷರತ್ತುಗಳು:*
ಅರ್ಜಿದಾರರು ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿರಬೇಕು ಹಾಗೂ 5 ರಿಂದ 18 ವರ್ಷದ ವಯೋಮಿತಿಯೊಳಗಿರಬೇಕು. ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿದ ಜನನ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸಬೇಕು. ಸಾಧನೆಯನ್ನು ಸಮರ್ಥಿಸುವ ಪತ್ರಿಕಾ ತುಣುಕುಗಳು, ಪ್ರಮಾಣ ಪತ್ರಗಳು ಮತ್ತು ಸೂಕ್ತ ಪೂರಕ ದಾಖಲೆಗಳನ್ನು ನೀಡಬೇಕು.
ರಾಜ್ಯ, ರಾಷ್ಟ್ರೀಯ ಅಥವಾ ಅಂತಾರಾಷ್ಟಿಯ ಮಟ್ಟದಲ್ಲಿ ಭಾಗವಹಿಸಿದ ಅಥವಾ ಪ್ರಶಸ್ತಿ ಪಡೆದ ವಿವರಗಳನ್ನು ಒದಗಿಸಬೇಕು. ಈ ಹಿಂದೆ ಯಾವುದೇ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಮಕ್ಕಳು ಮರಳಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ನಿಗದಿತ ಅರ್ಜಿ ನಮೂನೆಯನ್ನು ಬಳ್ಳಾರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಪಡೆದು, ಕನ್ನಡದಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 30 ರ ಸಂಜೆ ಒಳಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವಿನಗರ, ಎಸ್.ಪಿ. ಸರ್ಕಲ್, ಸ್ತಿ ಸೇವಾನಿಕೇತನ ಆವರಣ, ಬಳ್ಳಾರಿ-583103 ಅಥವಾ ದೂ.08392-266219 ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್