
ಬೆಂಗಳೂರು, 16 ಆಗಸ್ಟ್ (ಹಿ.ಸ.):
ಆ್ಯಂಕರ್:
ಮಂಡ್ಯ ಜಿಲ್ಲೆಯ ರೈತರು ನೀರಿನ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಮಂಡ್ಯದ ರೈತರ ಹೊಲ-ಗದ್ದೆಗಳು ಒಣಗಿ ಕಂಗಾಲಾಗಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕೆಆರ್‌ಎಸ್ ಜಲಾಶಯದ 10 ಗೇಟ್‌ಗಳನ್ನು ಮಧ್ಯರಾತ್ರಿ ತೆರೆದು ನೀರು ಹರಿಸಲಾಗಿದೆ ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಂಡ್ಯದ ರೈತರು ತಮ್ಮ ಬೆಳೆಗಳಿಗೆ ನೀರು ಸಿಗುವ ಕುರಿತು ಆತಂಕದಲ್ಲಿರುವಾಗ, ಅಧಿಕಾರಿಗಳ ಹೇಳಿಕೆಗಳ ಹಿಂದೆ ಸರ್ಕಾರ ಅಡಗಿಕೊಳ್ಳುತ್ತಿರುವುದೇಕೆ ಎಂದು ಅಶೋಕ ಪ್ರಶ್ನಿಸಿದ್ದಾರೆ. ಕೆಆರ್‌ಎಸ್‌ನಿಂದ ಎಷ್ಟು ಪ್ರಮಾಣದ ನೀರು ಹರಿಸಲಾಯಿತು, ಯಾವ ಸಮಯದಲ್ಲಿ ನೀರು ಬಿಡಲಾಯಿತು ಹಾಗೂ ಯಾರ ಆದೇಶದ ಮೇರೆಗೆ ನೀರು ಹರಿಸಲಾಯಿತು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮೈತ್ರಿ ರಕ್ಷಣೆ ಹಾಗೂ ಸ್ವಾರ್ಥ ರಾಜಕಾರಣಕ್ಕಾಗಿ ಕರ್ನಾಟಕದ ನೀರು ಮತ್ತು ರೈತರ ಬದುಕನ್ನು ತಮಿಳುನಾಡಿಗೆ ಅಡವಿಡಲಾಗುತ್ತಿದೆ ಎಂದು ಆರೋಪಿಸಿರುವ ಅಶೋಕ, ಇಂತಹ ಆಡಳಿತವನ್ನು ಕನ್ನಡಿಗರು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ನೀರು ಹಾಗೂ ಕರ್ನಾಟಕದ ರೈತರ ಬದುಕನ್ನು ಯಾವುದೇ ರಾಜಕೀಯ ರಾಜಿ-ಸಂಧಾನಕ್ಕೆ ಬಲಿಕೊಡಲು ಬಿಡುವುದಿಲ್ಲ. ಸರ್ಕಾರ ತಕ್ಷಣವೇ ನೀರು ಹರಿಸುವುದನ್ನು ನಿಲ್ಲಿಸಿ ಮಂಡ್ಯದ ರೈತರ ಹಿತ ಕಾಪಾಡಬೇಕು. ಇಲ್ಲದಿದ್ದರೆ ಜನರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.