
ಕೋಲಾರ, ೧೫ ಆಗಸ್ಟ್ (ಹಿ.ಸ.):
ಆ್ಯಂಕರ್ : ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕರುಗಳ ತ್ಯಾಗ-ಬಲಿದಾನಗಳನ್ನು ಸ್ಮರಿಸುವ ಈ ಶುಭದಿನದಂದು, ನಮ್ಮದೇ ಆದ ಸೊಗಡಿನ ಜಾನಪದ ಸಂಸ್ಕೃತಿಯನ್ನು ನೆನೆಯುತ್ತಿರುವುದು ಅತ್ಯಂತ ಸಾರ್ಥಕ ಸಂಗತಿಯಾಗಿದೆ. ಇಂದಿನ ಆಧುನಿಕತೆ ಮತ್ತು ಮೊಬೈಲ್-ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಗ್ರಾಮೀಣ ಸೊಗಡು, ಹಳ್ಳಿಯ ಹಬ್ಬಗಳು ಹಾಗೂ ನಮ್ಮ ತಾಯಿ ಬೇರಾದ ಜಾನಪದ ಕಲೆಗಳು ಮರೆಯಾಗುತ್ತಿವೆ. ಇಂತಹ ಸಮಯದಲ್ಲಿ ನಮ್ಮ ಮಕ್ಕಳಲ್ಲಿ ನಮ್ಮ ಸಂಪ್ರದಾಯ, ಮಣ್ಣಿನ ಕಲೆ ಮತ್ತು ದೇಶಿ ಸಂಸ್ಕೃತಿಯ ಪರಿಚಯ ಮಾಡಿಕೊಡುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ ಎಂದು ಬೆಗ್ಲಿ ಹೊಸಹಳ್ಳ ಮುಖ್ಯೋಪಾಧ್ಯಾಯಿನಿ ಗಾಯಿತ್ರಿ ಅಭಿಪ್ರಾಯಪಟ್ಟರು.
ಕೋಲಾರ ತಾಲ್ಲೂಕು ಬೆಗ್ಲಿ ಹೊಸಹಳ್ಳಿ ಪ್ರೌಢ ಶಾಲಾ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಸಹಯೋಗದೊಂದಿಗೆ ೮೦ನೇ ವರ್ಷದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ಕೇವಲ ಮನರಂಜನೆಯಲ್ಲ. ಅದೊಂದು ನಮ್ಮ ಜೀವನ ವಿಧಾನವಾಗಿದೆ. ನಮ್ಮ ಪರಂಪರೆಯ ಜೀವನಾಡಿ. ನಮ್ಮ ಹಿರಿಯರು ಉಳಿಸಿ ಬೆಳೆಸಿಕೊಂಡು ಬಂದ ಈ ಕಲೆಗಳು ಅಳಿದುಹೋಗದಂತೆ ಕಾಪಾಡುವುದು ವಿದ್ಯಾರ್ಥಿಗಳಾದ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಓದು-ಬರಹದ ಜೊತೆಗೆ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ನಮ್ಮ ದೇಶಿ ಸಂಸ್ಕೃತಿ ಹಾಗೂ ಜಾನಪದ ಕಲೆಯ ಉಳಿವಿನ ಬಗ್ಗೆ ಅರಿವು ಮೂಡಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ನಮ್ಮ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿರುವ ಮಕ್ಕಳನ್ನು ಸನ್ಮಾನಿಸುತ್ತಿರುವುದು ಸಂತೋಷದ ವಿಷಯ. ಅವರೊಂದಿಗೆ ಇಂದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಕಲಾವಿದರಿಗೆ ಮತ್ತು ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತಿರುವ ಗ್ರಾಮದ ಮುಖಂಡರಿಗೆ ಹಾಗೂ ನನ್ನ ಸಹೋದ್ಯೋಗಿ ಶಿಕ್ಷಕ ವೃಂದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗರಾಜ್ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ದೇಶಪ್ರೇಮ ಹಾಗೂ ಕಲಾಭಿಮಾನವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ರಕ್ಷಿತ, ಶ್ರೀಲತಾ, ಪೂರ್ಣಿಮಾ, ಪ್ರಿಯಾಂಕ ರವರನ್ನು ಸನ್ಮಾನಿಸಲಾಯಿತು. ಕೆನರಾ ಬ್ಯಾಂಕ್ ವತಿಯಿಂದ ಪ್ರೌಢಶಾಲೆಯ ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಈನೆಲ ಈಜಲ ಕಲಾ ತಂಡದಿAದ ಜಾನಪದ ಗಾಯನ, ವಿನುತ ಮತ್ತು ತಂಡದಿAದ ನೃತ್ಯ ರೂಪಕ ಮತ್ತು ಜನಪದ ನೃತ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬೆಗ್ಲಿಹೊಸಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್ ಮೂರ್ತಿ, ಸಹ ಶಿಕ್ಷಕರಾದ ಸಂಗೀತ್ ವೆಂಕಟೇಶ್, ಗಾಯತ್ರಿ, ದೈಹಿಕ ಶಿಕ್ಷಕ ಆನಂದ್, ರಾಜೇಶ್ವರಿ, ವೆಂಕಟಾಚಲಪತಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್