
ಗದಗ, 15 ಆಗಸ್ಟ್ (ಹಿ.ಸ.)
ಆ್ಯಂಕರ್:- ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಕ್ಷೇತ್ರ ಹಿಂದುಳಿಯಲು ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ನಾವು ಬದಲಾಗದಿರುವುದು ಮತ್ತು ಸ್ಥಳೀಯ ನಾಯಕತ್ವದ ಕೊರತೆಯೇ ಮುಖ್ಯ ಕಾರಣ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಗದಗನ ಎ.ಪಿ.ಎಂ.ಸಿಯಲ್ಲಿರುವ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ಗದಗ ಉತ್ಸವ 2026 ರ ಅಂಗವಾಗಿ ಭೇಟಿ ನೀಡಿ ಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಭಾಗದ ಕೈಗಾರಿಕಾ ಪ್ರಗತಿಗೆ ಹೊಸ ಸ್ಪಂದನೆ ಅಗತ್ಯವಿದೆ. ಜಿನ್ನಿಂಗ್, ಸ್ಪಿನ್ನಿಂಗ್ ಹಾಗೂ ಆಯಿಲ್ ಮಿಲ್ಗಳಂತಹ ಸಾಂಪ್ರದಾಯಿಕ ಉದ್ಯಮಗಳು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದ ಕಾರಣ ನಿರಂತರ ಸವಾಲುಗಳನ್ನು ಎದುರಿಸುತ್ತಿವೆ. ರಾಯಚೂರಿನಂತಹ ದೊಡ್ಡ ಎಪಿಎಂಸಿ ಮಾರುಕಟ್ಟೆಗಳಲ್ಲಿ ಬೆಳೆಯುವ ಉತ್ತಮ ದರ್ಜೆಯ ಹತ್ತಿಯನ್ನು ಸ್ಥಳೀಯವಾಗಿ ಸಂಸ್ಕರಿಸುವ ಬದಲು ಕೊಯಮತ್ತೂರಿಗೆ ಕಳುಹಿಸುತ್ತಿರುವುದು ಸ್ಥಳೀಯ ಉದ್ಯಮದ ಹಿನ್ನಡೆಗೆ ಕಾರಣವಾಗಿದೆ ಎಂದು ಹೇಳಿದರು.
ಇಂಡಸ್ಟ್ರಿಯಲ್ ಪಾರ್ಕ್ ಮತ್ತು ಆಂಕರ್ ಇಂಡಸ್ಟ್ರಿ: ಬೃಹತ್ ಪ್ರಮಾಣದ ಕೈಗಾರಿಕಾ ಅಭಿವೃದ್ಧಿಗಾಗಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಿ, ಅಲ್ಲಿ ದೊಡ್ಡ ಮಟ್ಟದ 'ಆಂಕರ್ ಇಂಡಸ್ಟ್ರಿ'ಗಳನ್ನು ಆಕರ್ಷಿಸಬೇಕು. ಇದರಿಂದ ಅದರ ಸುತ್ತಲೂ ಸಣ್ಣ ಮತ್ತು ಪೂರಕ ಉದ್ಯಮಗಳು ಸ್ವತಂತ್ರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಸದಾ ಅಳುವ ಬದಲು, ಸ್ಥಳೀಯ ನಾಯಕರು ಮತ್ತು ಉದ್ಯಮಿಗಳು ಒಗ್ಗೂಡಿ ದೂರದೃಷ್ಟಿಯ ಕಾಂಕ್ರೀಟ್ ಪ್ರಸ್ತಾವನೆಗಳನ್ನು ತಯಾರಿಸಿ ಸರ್ಕಾರದ ಮುಂದಿಡಬೇಕು. ಸ್ಥಳೀಯ ನಾಯಕತ್ವವು ಸ್ಪಷ್ಟ ಯೋಚನೆ ಮತ್ತು ಪ್ರಸ್ತಾವನೆಗಳೊಂದಿಗೆ ಸರ್ಕಾರದ ಬೆನ್ನತ್ತಿದರೆ ಮಾತ್ರ ಉತ್ತರ ಕರ್ನಾಟಕದಲ್ಲಿ ನೈಜ ಕೈಗಾರಿಕಾ ಕ್ರಾಂತಿ ಸಾಧ್ಯ ಎಂದು ಹೇಳಿದರು.
ವ್ಯಾಪಾರಿಗಳ ಸಮಸ್ಯೆಗಳಿಗೆ ಗಮನ
ಕಳೆದ ಹಲವಾರು ವರ್ಷಗಳಿಂದ ವಾಣಿಜ್ಯೋದ್ಯಮ ಹಾಗೂ ಚೇಂಬರ್ ವ್ಯಾಪ್ತಿಯ ವ್ಯಾಪಾರಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ಸಿಗದೆ, ಎಲ್ಲಾ ಸಮಸ್ಯೆಗಳು ಒಂದೆಡೆ ಕೂಡಿಬಂದಿವೆ. ಅವುಗಳನ್ನು ಹಂತ-ಹಂತವಾಗಿ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಇತ್ತೀಚೆಗೆ 'ಲೈಸೆನ್ಸ್ ರಾಜ್' ಮತ್ತು ಪದೇ ಪದೇ ಇಲಾಖಾ ಇನ್ಸ್ಪೆಕ್ಟರ್ಗಳ ತಪಾಸಣೆ ಕಡಿಮೆಯಾಗಿದೆ. ಇದರಿಂದ ವ್ಯಾಪಾರಸ್ಥರಿಗೆ ಒಂದಷ್ಟು ನಿರಾಳತೆ ಸಿಕ್ಕಂತಾಗಿದೆ ಎಂದು ಹೇಳಿದರು.
ಗದಗ ವ್ಯಾಪಾರ ವಲಯದ ಇತಿಹಾಸ
ಗದಗ ನಗರವು ಸುದೀರ್ಘವಾದ ವಾಣಿಜ್ಯ ಇತಿಹಾಸವನ್ನು ಹೊಂದಿದೆ. ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಇತರ ನಗರಗಳಿಗಿಂತಲೂ ಮುಂಚಿತವಾಗಿಯೇ ಗದಗಿನಲ್ಲಿ ಬೃಹತ್ ಮಟ್ಟದ ವ್ಯಾಪಾರ-ವಹಿವಾಟು ಪ್ರಾರಂಭವಾಗಿತ್ತು. ಹುಬ್ಬಳ್ಳಿ ವ್ಯಾಪಾರ ಬೆಳೆಯುವ ಮುನ್ನವೇ ಗದಗ ವ್ಯಾಪಾರ ಕ್ಷೇತ್ರದ ಕೇಂದ್ರಬಿಂದುವಾಗಿತ್ತು ಎಂದು ಬೊಮ್ಮಾಯಿ ಸ್ಮರಿಸಿದರು.
ಒಂದು ಕಾಲದಲ್ಲಿ ಗದಗ ನಗರವು ರೈತರು ಬೆಳೆದ ಪ್ರತಿಯೊಂದು ಕೃಷಿ ಉತ್ಪನ್ನಗಳಾದ ಹತ್ತಿ, ಕಾಳುಕಡಿ ಇತ್ಯಾದಿಗೆ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಉತ್ಪನ್ನಗಳ ಮಾರುಕಟ್ಟೆ ಇತರ ಎಪಿಎಂಸಿ ಗಳಿಗೆ ಸ್ಥಳಾಂತರಗೊಂಡು, ಪ್ರಸ್ತುತ ಕೇವಲ ಕಾಳುಕಡಿ ವ್ಯಾಪಾರ ಮಾತ್ರ ಗದಗಿನಲ್ಲಿ ಉಳಿದುಕೊಂಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ವಾಣಿಜ್ಯ ಕ್ಷೇತ್ರ ಮತ್ತೆ ಬೆಳೆಯಬೇಕಾಗಿದೆ
ಗದಗ ನಗರವು ವಾಣಿಜ್ಯೋದ್ಯಮದಲ್ಲಿ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಎಲ್ಲಾ ಅರ್ಹತೆ ಮತ್ತು ಸಾಮರ್ಥ್ಯವನ್ನು ಹೊಂದಿದೆ. ವರ್ತಕರು ಮತ್ತು ಸರ್ಕಾರ ಒಂದಾಗಿ ಗದಗಿನ ಹಳೆಯ ವ್ಯಾಪಾರ ವೈಭವವನ್ನು ಮರಳಿ ತರಲು ಶ್ರಮಿಸಬೇಕಾಗಿದೆ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಜವಳಿ ಪಾರ್ಕ್
ನಮ್ಮ ಹಣೆಬರಹ ನಾವೇ ಬರೆಯಬೇಕು ಸಂಘಟಿತವಾಗಿ ಕೆಲಸಮಾಡಬೇಕು. ನಾನು ಗುಲಬರ್ಗಕ್ಕೆ ಪಧಾನ ಮಂತ್ರಿ ಮಿತ್ರ ಟೆಕ್ಸ್ ಟೈಲ್ ಪಾರ್ಕ್ ಅಂತ ಮಾಡಲು ಆದೇಶಿಸಿದ್ದೆ, ಇಡೀ ದೇಶದಲ್ಲಿ ಏಳು ಪಾರ್ಕ್ ಮಾತ್ರ ಮಾಡಲಾಗಿದೆ. ಅದರಲ್ಲಿ ಒಂದನ್ನು ಗುಲಬರ್ಗದಲ್ಲಿ ಆರಂಭಿಸಿದೆ. ಅದಕ್ಕೆ ಒಂದು ಸಾವಿರ ಎಕರ ಜಮೀನು ಬೇಕು ಅಂತ ಅಲ್ಲಿ ಮಾಡಿದೆ. ನಾನು ಕಾರ್ಮಿಕ, ಜವಳಿ ಕೌಶಲ್ಯಾಭಿವೃದ್ಧಿ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷನಾದ ಮೇಲೆ ಕಾಮರಾಗಿ ಆರಂಭವಾಗಿದೆ. ಅಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಅಂತಹ ಒಂದು ಪಾರ್ಕ್ ಗದಗ ಹಾವೇರಿ ಜಿಲ್ಲೆಗಳಲ್ಲಿ ಬರಬೇಕು. ವಯಕ್ತಿಕ ಹ್ಯಾಂಡ್ಲೂಮ್ ಪಾರ್ಕ್ ಮಾಡಲು ಗದಗ ಡಿಸಿಯವರಿಗೆ 50 ಎಕರೆ ಜಮೀನು ನೀಡುವಂತೆ ಕೇಳಿದ್ದೇನೆ. ಆದಷ್ಟು ಬೇಗ ರಾಜ್ಯ ಸರ್ಕಾರ ಜಾಗ ನೀಡಿದರೆ ಡಿಸೆಂಬರ್ ಒಳಗೆ ಮಂಜೂರು ಮಾಡುವ ಉದ್ದೇಶ ಇದೆ. ಜವಳಿ ಜೊತೆಗೆ ಅನೇಕ ಉದ್ಯಮಗಳು ಇಲ್ಲಿಗೆ ಬರುತ್ತವೆ. ವ್ಯಾಪಾರ ವ್ಯವಹಾರ ಆರಂಭವಾದರೆ ಲಾಜಿಸ್ಟಿಕ್ಸ್ ಬರುತ್ತದೆ. ಮಾರುಕಟ್ಟೆ ಬರುತ್ತದೆ. ಬಾಡಿಗೆ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕತೆ ಬೆಳೆಯುತ್ತದೆ. ಇದರೊಂದಿಗೆ ಆಹಾರ ಸಂರಕ್ಷಣೆ ಮಾಡಲು ಪ್ರಸ್ತಾವನೆ ಕೊಟ್ಟಿದ್ದೇನೆ ಎಂದು ಹೇಳಿದರು.
2ಎಕರೆ ಜಮೀನು
ಗದಗ ವಾಣಿಜ್ಯೋದ್ಯಮ ಸಂಘಕ್ಕೆ ಸರ್ಕಾರದಿಂದ 2 ಎಕರೆ ಜಮೀನು ಕೊಡಿಸುವ ಪಯತ್ನ ಮಾಡಲಾಗುವುದು. ಅಲ್ಲಿ ಪ್ರತಿ ವರ್ಷ ಒದೊಂದು ಕ್ಷೇತದ ಉತ್ಪನ್ನಗಳ ಪ್ರದರ್ಶನ ಮಾಡಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಡಿಸಿ ಜೊತೆ ಚರ್ಚೆ ಮಾಡಿ ಎರಡು ಎಕರೆ ಜಮೀನು ಗುರುತಿಸಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ. ಅಲ್ಲದೇ ಸ್ಥಳೀಯ ಶಾಸಕರಾದ ಎಚ್.ಕೆ.ಪಾಟೀಲರೊಂದಿಗೂ ಚರ್ಚಿಸುತ್ತೇನೆ. ವಾಣಿಜ್ಯೋದ್ಯಮ, ಆರ್ಥಿಕತೆ ಬೆಳೆದರೆ ಮಾತ್ರ ದೇಶದ ಅಭಿವೃದ್ಧಿ ಆಗಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ. ಇದಕ್ಕೆ ಸಂಘದ ಅಧ್ಯಕ್ಷರು ಸಮಯ ಕೊಡಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಶರಣಬಸಪ್ಪ ಗುಡಿಮನಿ, ಗದಗ ಉತ್ಸವ ಸಮಿತಿ ಅಧ್ಯಕ್ಷರಾದ ಮಧುಸೂದನ ಪುಣೇಕರ, ಮುಖಂಡರುಗಳಾದ ಈಶಣ್ಣ ಮುನವಳ್ಳಿ, ಸದಾಶಿವಯ್ಯ ಸಂಶಿಮಠ, ಚನ್ನವೀರ ಹುಣಡಿಕಟ್ಟಿ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು
---------------
ಹಿಂದೂಸ್ತಾನ್ ಸಮಾಚಾರ್ / lalita MP