
ವಿಜಯಪುರ, 26 ಜುಲೈ (ಹಿ.ಸ.)
ಆ್ಯಂಕರ್ : ವಿಜಯಪುರ ನಗರದ ಭೋವಿ ಬಡಾವಣೆಯಲ್ಲಿ ನನ್ನ ಗಿಡ ನನ್ನ ಭೂಮಿ ಹಾಗೂ ಪಿ.ಎನ್. ಮೆಮೋರಿಯಲ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಗಿಡ ನೆಡುವ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಮಾನವ ತನ್ನ ಸ್ವಾರ್ಥಕ್ಕಾಗಿ ನಗರೀಕರಣ ಮತ್ತು ಕೈಗಾರಿಕೀಕರಣದ ಹೆಸರಿನಲ್ಲಿ ಅರಣ್ಯಗಳನ್ನು ನಿರಂತರವಾಗಿ ನಾಶಪಡಿಸುತ್ತಿದ್ದಾನೆ. ಇದರ ಪರಿಣಾಮವಾಗಿ ದೇಶಾದ್ಯಂತ ಬರಗಾಲ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನ, ವಾಯು ಮಾಲಿನ್ಯ ಹಾಗೂ ಹವಾಮಾನ ವೈಪರೀತ್ಯದಂತಹ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಕೃತಿಗೆ ನಾವು ನೀಡಬಹುದಾದ ಅತ್ಯುತ್ತಮ ಕೊಡುಗೆ ಎಂದರೆ ಗಿಡಗಳನ್ನು ನೆಡುವುದು ಮತ್ತು ಅವುಗಳನ್ನು ಮರಗಳಾಗಿ ಬೆಳೆಸುವುದು. ಗಿಡ ನೆಡುವುದು ಕೇವಲ ಒಂದು ಕಾರ್ಯಕ್ರಮವಾಗಿ ಉಳಿಯಬಾರದು. ಅದು ದೊಡ್ಡ ಮರವಾಗಿ ಬೆಳೆಯುವವರೆಗೆ ನೀರುಣಿಸಿ, ಸಂರಕ್ಷಿಸಿ ಪೋಷಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ವಹಿಸಬೇಕು ಎಂದು ಕರೆ ನೀಡಿದರು.
ಪ್ರತಿಯೊಬ್ಬ ನಾಗರಿಕರು ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಅಥವಾ ಇತರ ವಿಶೇಷ ದಿನಗಳ ಸಂದರ್ಭದಲ್ಲಿ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದನ್ನು ಬೆಳೆಸುವ ಸಂಕಲ್ಪ ಮಾಡಬೇಕು. ಮುಂದಿನ ಪೀಳಿಗೆಗೆ ಆಸ್ತಿ-ಪಾಸ್ತಿ ನೀಡದಿದ್ದರೂ ಪರವಾಗಿಲ್ಲ, ಉಸಿರಾಡಲು ಶುದ್ಧ ಗಾಳಿ ಹಾಗೂ ಬದುಕಲು ಉತ್ತಮ ಪರಿಸರವನ್ನು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಒಂದು ಮರವನ್ನು ಕಡಿದರೆ ಹತ್ತು ಗಿಡಗಳನ್ನು ನೆಡೋಣ ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪರಿಸರ ಸಮತೋಲನವನ್ನು ಕಾಪಾಡಲು ಸಾಧ್ಯವಾಗುತ್ತದೆ. ಪ್ರಕೃತಿ ಉಳಿದರೆ ಮಾತ್ರ ಮಾನವ ಬದುಕು ಸುರಕ್ಷಿತವಾಗಿರುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಂದೇಶಗಳನ್ನು ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಅವುಗಳ ಆರೈಕೆ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಗಮೇಶ್ ಹೌದೆ, ಪರಿಸರ ಪ್ರೇಮಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಎನ್.ಬಿ. ಪಾಟೀಲ, ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಯಡಹಳ್ಳಿ, ಶರಣು ಸಬರದ ಹಾಗೂ ನನ್ನ ಗಿಡ ನನ್ನ ಭೂಮಿ ಸಂಘಟನೆಯ ಕಾರ್ಯಕರ್ತರು ಸೇರಿದಂತೆ ಅನೇಕ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande