
ವಿಜಯಪುರ, 26 ಜುಲೈ (ಹಿ.ಸ.)
ಆ್ಯಂಕರ್ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಕುರಿತು ತೀವ್ರ ಪ್ರತಿಕ್ರಿಯೆ ನೀಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದ್ದು, ದೇಶದಾದ್ಯಂತ ನಡೆದ ಪ್ರತಿಭಟನೆಗಳು ಹಾಗೂ ಪ್ರತಿಪಕ್ಷಗಳ ನಿರಂತರ ಹೋರಾಟದ ಫಲವಾಗಿ ಕೊನೆಗೂ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ವಿಜಯಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀಟ್ ಪರೀಕ್ಷೆ ವಿವಾದ ಆರಂಭವಾಗಿ 47 ದಿನಗಳಾದರೂ ಕೇಂದ್ರ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ಮೌನ ವಹಿಸಿತ್ತು. ಕೊನೆಗೆ ಕುಂಭಕರ್ಣ ನಿದ್ರೆಯಿಂದ ಎದ್ದಂತೆ ಈಗ ರಾಜೀನಾಮೆ ಪಡೆಯಲಾಗಿದೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಹಾಗೂ ವಿದ್ಯಾರ್ಥಿಗಳು ದೇಶಾದ್ಯಂತ ನಡೆಸಿದ ಹೋರಾಟವೇ ಈ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದ ಅವರು, ಪ್ರತಿಭಟನೆ ಆರಂಭವಾದ 24 ಗಂಟೆಯೊಳಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಅನಗತ್ಯ ವಿಳಂಬದಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದರು ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿದ್ಯಾರ್ಥಿಗಳು ಹಾಗೂ ಪೋಷಕರ ಕ್ಷಮೆಯಾಚಿಸಬೇಕು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಗ್ರಹವನ್ನು ಸಮರ್ಥಿಸಿದ ಸಚಿವರು, ಪ್ರಧಾನಿ ಖಂಡಿತವಾಗಿಯೂ ಕ್ಷಮೆ ಕೇಳಬೇಕು. ಪರೀಕ್ಷಾ ಅಕ್ರಮದಿಂದ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬಹುದು. ಆದರೆ ಅವರ ಜೀವವನ್ನು ಮರಳಿ ತರಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಪ್ರತಿ ಸಮಸ್ಯೆಯಲ್ಲೂ ಧರ್ಮ ಮತ್ತು ಜಾತಿಯ ವಿಚಾರಗಳನ್ನು ಮುಂದಿಟ್ಟು ಸಮಾಜವನ್ನು ವಿಭಜಿಸುವ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಬೆಲೆ ಏರಿಕೆ, ಸಿಇಟಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ವಿಷಯಗಳಲ್ಲಿಯೂ ಧಾರ್ಮಿಕ ಬಣ್ಣ ಬಳಿಯುವ ಪ್ರಯತ್ನ ನಡೆದಿದೆ. ಆದರೆ ಈ ಬಾರಿ ವಿದ್ಯಾರ್ಥಿಗಳ ಹೋರಾಟದಲ್ಲಿ ಹಿಂದೂ-ಮುಸ್ಲಿಂ ಎನ್ನುವ ಭೇದವಿಲ್ಲದೆ ಎಲ್ಲ ಸಮುದಾಯದವರು ಭಾಗವಹಿಸಿದ್ದರು ಎಂದು ಹೇಳಿದರು.
ಮೋದಿ ಯುಗ ಅಂತ್ಯದತ್ತ ಸಾಗುತ್ತಿದೆ. ಈ ಹೋರಾಟದ ನಿಜವಾದ ಕ್ರೆಡಿಟ್ ತಮ್ಮ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳು ಹಾಗೂ ನ್ಯಾಯಕ್ಕಾಗಿ ಬೀದಿಗಿಳಿದ ವಿದ್ಯಾರ್ಥಿ ಸಮುದಾಯಕ್ಕೆ ಸಲ್ಲಬೇಕು ಎಂದು ಎಂ.ಬಿ. ಪಾಟೀಲ ಹೇಳಿದರು.
ಇದೇ ವೇಳೆ ಎಥೆನಾಲ್ ನೀತಿ ಸೇರಿದಂತೆ ವಿವಿಧ ವಿಚಾರಗಳಲ್ಲೂ ಕೇಂದ್ರ ಸರ್ಕಾರ ಹೆಚ್ಚು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟ ಅವರು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಆಡಳಿತವನ್ನು ಸ್ಮರಿಸಿ, ವಿಶ್ವ ಮೆಚ್ಚುವಂತಹ ಆರ್ಥಿಕ ವ್ಯವಸ್ಥೆಯನ್ನು ಮನಮೋಹನ್ ಸಿಂಗ್ ದೇಶಕ್ಕೆ ನೀಡಿದ್ದರು. ಆದರೆ ಇಂದಿನ ಆಡಳಿತದಲ್ಲಿ ಪ್ರಧಾನಿ ಒಂದು ದಿನವೂ ಪತ್ರಿಕಾಗೋಷ್ಠಿ ನಡೆಸಿಲ್ಲ ಎಂದು ಟೀಕಿಸಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ, ಒಂದೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ. ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕು ಎಂದು ನಾನು ಈಗಾಗಲೇ ಪಕ್ಷದ ವರಿಷ್ಠರ ಬಳಿ ಮನವಿ ಮಾಡಿದ್ದೇನೆ. ಯಾರಿಗೆ ಸ್ಥಾನ ನೀಡುತ್ತಾರೆ ಎಂಬುದು ಮುಖ್ಯವಲ್ಲ, ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ದೊರಕಬೇಕು ಎಂಬುದು ನನ್ನ ಆಶಯ ಎಂದರು.
ಬರಗಾಲ ಘೋಷಣೆ ಕುರಿತು
ವಿಜಯಪುರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬರ ಘೋಷಣೆ ಮಾಡುವ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇದೆ. ಕೇಂದ್ರ ಸರ್ಕಾರವೇ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande