
ತಿರುಪತಿ, 23 ಜುಲೈ (ಹಿ.ಸ.):
ಆ್ಯಂಕರ್:
ಕಲಿಯುಗದ ವೈಕುಂಠ ತಿರುಮಲ ಕ್ಷೇತ್ರದಲ್ಲಿ ಮೈಸೂರು ರಾಜಮನೆತನ ಹಾಗೂ ತಿರುಪತಿ ತಿರುಮಲ ದೇವಸ್ಥಾನದ ನಡುವಿನ 300 ವರ್ಷಗಳ ಐತಿಹಾಸಿಕ ಬಾಂಧವ್ಯವನ್ನು ಸಾರುವ ‘ಪಲ್ಲವೋತ್ಸವ’ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಹಾಗೂ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈ ವಿಶೇಷ ಉತ್ಸವದಲ್ಲಿ ಭಾಗವಹಿಸಿ ಶ್ರೀನಿವಾಸ ಸ್ವಾಮಿಯ ದರ್ಶನ ಪಡೆದರು.
ಮೈಸೂರು ಮಹಾರಾಜರ ಜನ್ಮ ನಕ್ಷತ್ರವಾದ ‘ಉತ್ತರಾಭಾದ್ರ’ ಸ್ಮರಣಾರ್ಥವಾಗಿ ಪ್ರತಿ ವರ್ಷ ಈ ಸಾಂಪ್ರದಾಯಿಕ ಉತ್ಸವವನ್ನು ಆಚರಿಸಲಾಗುತ್ತದೆ. ಸಹಸ್ರದೀಪಾಲಂಕಾರ ಸೇವೆಯ ಬಳಿಕ, ಶ್ರೀದೇವಿ-ಭೂದೇವಿ ಸಮೇತ ಮಲಯಪ್ಪ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಭವ್ಯ ಮೆರವಣಿಗೆಯಲ್ಲಿ ತಿರುಮಲದ ಕರ್ನಾಟಕ ಸತ್ರಕ್ಕೆ ಕರೆತರಲಾಯಿತು. ಈ ಪವಿತ್ರ ವೇದಿಕೆಯಲ್ಲಿ ಮೈಸೂರು ರಾಜಮನೆತನದ ಪ್ರತಿನಿಧಿಯಾಗಿ ಪಾಲ್ಗೊಂಡ ಯದುವೀರ್ ಒಡೆಯರ್ ಮತ್ತು ಕರ್ನಾಟಕ ಸರ್ಕಾರದ ಅಧಿಕಾರಿಗಳು ಸ್ವಾಮಿಗೆ ಸಾಂಪ್ರದಾಯಿಕ ನೈವೇದ್ಯ ಹಾಗೂ ವಿಶೇಷ ಮಂಗಳಾರತಿ ಸಮರ್ಪಿಸಿದರು.
ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಮೈಸೂರು ಅರಸರು ತಿರುಮಲ ಕ್ಷೇತ್ರದ ಪರಮ ಭಕ್ತರಾಗಿದ್ದಾರೆ.
ಶ್ರೀ ಸನ್ನಿಧಿಯ ಗರ್ಭಗುಡಿಯಲ್ಲಿ ನಿರಂತರವಾಗಿ ಉರಿಯುವ ‘ಬ್ರಹ್ಮದೀಪ’ ಮತ್ತು ‘ಮಹಾರಾಜದೀಪ’ಗಳಿಗೆ ಮೈಸೂರು ಸಂಸ್ಥಾನದಿಂದ ಇಂದಿಗೂ ನಿತ್ಯ 5 ಕೆಜಿ ತುಪ್ಪ ನೀಡಲಾಗುತ್ತಿದೆ. ಅಲ್ಲದೆ, ಪ್ರತಿದಿನ ಸುಪ್ರಭಾತ ಸೇವೆಯ ಮುನ್ನ 'ನವನೀತ ಆರತಿ' (ಬೆಣ್ಣೆ ಆರತಿ) ನೆರವೇರಿಸುವ ವಿಶಿಷ್ಟ ಪದ್ಧತಿ ಜೀವಂತವಾಗಿದೆ. ಈ ಶತಮಾನಗಳ ಸಂಪ್ರದಾಯ ಮುಂದುವರಿಸಿದ ಯದುವೀರ್ ಒಡೆಯರ್, ನಾಡಿನ ಸಮಗ್ರ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII