ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಗದಗ, 19 ಜುಲೈ (ಹಿ.ಸ.) ಆ್ಯಂಕರ್:- 2026-27ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ (ಎಸ್ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ನೀಡಲು ರಾಜ್ಯ ಸರ್ಕಾರ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಶಿರಹಟ್ಟಿ ಹಾಗೂ ಲಕ್ಷ್
ಫೋಟೋ


ಗದಗ, 19 ಜುಲೈ (ಹಿ.ಸ.)

ಆ್ಯಂಕರ್:- 2026-27ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ (ಎಸ್ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ನೀಡಲು ರಾಜ್ಯ ಸರ್ಕಾರ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕು ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ನಿಗದಿತ ವೆಬ್ಸೈಟ್ ಮೂಲಕ ಕಡ್ಡಾಯವಾಗಿ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳು ವೆಬ್ಸೈಟ್ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿವೇತನದ ಪ್ರಯೋಜನ ಪಡೆಯಲು ಎಲ್ಲಾ ದಾಖಲೆಗಳು ಸರಿಯಾಗಿರುವುದು ಹಾಗೂ ಅರ್ಜಿ ಪೂರ್ಣವಾಗಿ ಭರ್ತಿ ಮಾಡಿರುವುದು ಕಡ್ಡಾಯವಾಗಿದೆ.

ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಆಧಾರ್ ಸಂಖ್ಯೆ ಹಾಗೂ ಆಧಾರ್ಗೆ ನೋಂದಾಯಿತ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಎಸ್ಎಸ್ಎಲ್ಸಿ ನೋಂದಣಿ ಸಂಖ್ಯೆ, ತಹಶೀಲ್ದಾರರಿಂದ ಪಡೆದ ಗಣಕೀಕೃತ ಜಾತಿ ಮತ್ತು ಆದಾಯ ಪ್ರಮಾಣಪತ್ರದ ಆರ್ಡಿ ಸಂಖ್ಯೆ, ವಿಕಲಚೇತನ ವಿದ್ಯಾರ್ಥಿಗಳಾದರೆ ಯುಡಿಐಡಿ ಗುರುತಿನ ಸಂಖ್ಯೆ, ವಿದ್ಯಾರ್ಥಿಯ ವಿಳಾಸ, ಕಾಲೇಜಿನ ದಾಖಲಾತಿ ಅಥವಾ ನೋಂದಣಿ ಸಂಖ್ಯೆ, ಸಂಬಂಧಿತ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ) ಹಾಗೂ ಹಾಸ್ಟೆಲ್ ವಿವರಗಳನ್ನು ಸಲ್ಲಿಸಬೇಕು.

ಅಲ್ಲದೆ, ವಿದ್ಯಾರ್ಥಿಯ ಪೋಷಕರ ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷದ ಮಿತಿಯೊಳಗೆ ಇರಬೇಕು. ವಿದ್ಯಾರ್ಥಿಗಳು ತಮ್ಮ ಎಸ್ಎಸ್ಪಿ ಲಾಗಿನ್ನಲ್ಲಿ ಫ್ರೀಶಿಪ್ ಕಾರ್ಡ್ಗೆ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಇಲಾಖೆ ತಿಳಿಸಿದೆ.

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಮೊದಲು ಎನ್ಎಸ್ಪಿ ಒನ್ ಟೈಮ್ ರಿಜಿಸ್ಟ್ರೇಷನ್ ಮಾಡಿಸಿಕೊಂಡು, ಪಡೆದ ನೋಂದಣಿ ಸಂಖ್ಯೆಯೊಂದಿಗೆ ಎಸ್ಎಸ್ಪಿ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಸಮಾಜ ಕಲ್ಯಾಣ ಇಲಾಖೆ, ಶಿರಹಟ್ಟಿ ಕಚೇರಿ ಅಥವಾ ಕರ್ನಾಟಕ-1 / ಗ್ರಾಮ-1 ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು.

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೂ ಸಹ ಮೊದಲು ಎನ್ಎಸ್ಪಿ ಒಟಿಆರ್ ನೋಂದಣಿ ಮಾಡಿಕೊಂಡು ನಂತರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕು. ಜೊತೆಗೆ, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಕಡ್ಡಾಯವಾಗಿ ಮಾಡಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿವೇತನದ ಮೊತ್ತ ಜಮೆಯಾಗಲು ತೊಂದರೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಯಾವುದೇ ತಪ್ಪು ಮಾಹಿತಿ ನೀಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಾತ್ರ ವಿದ್ಯಾರ್ಥಿವೇತನ ಮಂಜೂರಾತಿ ಪ್ರಕ್ರಿಯೆ ಆರಂಭವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಶಿರಹಟ್ಟಿ ಅವರ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 08487-295097 ಅನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande